T20 World Cup 2026: ಟಿ20 ವಿಶ್ವಕಪ್ನ ಲೀಗ್ ಹಂತದಲ್ಲಿ ಸತತ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲೇ ಪರಾಜಯಗೊಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ 111 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 76 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಈ ಪಂದ್ಯದ ಆರಂಭದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ಭಾವಿಸುತ್ತೇನೆ. ಏಕೆಂದರೆ ಆರಂಭದಲ್ಲಿ ನಾವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ಕೇವಲ 21 ರನ್ಗಳಿಗೆ 3 ವಿಕೆಟ್ ಕಬಳಿಸಿ ನಮ್ಮ ಬೌಲರ್ಗಳು ಆರಂಭಿಕ ಆಘಾತ ನೀಡಿದ್ದರು.
ಆದರೆ ಆ ಬಳಿಕ 7 ರಿಂದ 15ನೇ ಓವರ್ವರೆಗೆ ಸೌತ್ ಆಫ್ರಿಕಾ ಬ್ಯಾಟರ್ಗಳು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇದಾಗ್ಯೂ ಕೊನೆಯ ಹಂತದಲ್ಲಿ ನಮ್ಮ ಬೌಲರ್ಗಳು ಉತ್ತಮ ದಾಳಿ ಸಂಘಟಿಸಿದ್ದರು. ಒಟ್ಟಾರೆಯಾಗಿ, ನಾವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ಅದೇ ರೀತಿ ನಾವು ಸ್ವಲ್ಪ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು.
ಏಕೆಂದರೆ 180-185 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿದ್ದರೆ, ನೀವು ಪವರ್ಪ್ಲೇಯಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ನೀವು ಪವರ್ಪ್ಲೇಯಲ್ಲಿ ಪಂದ್ಯವನ್ನು ಕಳೆದುಕೊಳ್ಳಬಹುದು. ನಾವು ಪವರ್ಪ್ಲೇನಲ್ಲಿ ಹಲವಾರು ವಿಕೆಟ್ಗಳನ್ನು ಕಳೆದುಕೊಂಡಿದ್ದೇವೆ.
ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಲು ಸಣ್ಣ ಸಣ್ಣ ಜೊತೆಯಾಟವಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ಸೋಲಿಗೆ ಮುಖ್ಯ ಕಾರಣ ಪವರ್ಪ್ಲೇನಲ್ಲೇ ವಿಕೆಟ್ ಕಳೆದುಕೊಂಡಿರುವುದು. ಇದರಿಂದ ನಾವು ಪಾಠ ಕಲಿತಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಈ ಸೋಲಿನ ಹೊರತಾಗಿಯೂ ಸಕರಾತ್ಮಕ ವಿಷಯ ಎಂದರೆ, ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡಿದ ರೀತಿ. ಇಬ್ಬರೂ ಅತ್ಯುತ್ತಮವಾಗಿ ದಾಳಿ ಸಂಘಟಿಸಿದ್ದರು. ಇವರಿಬ್ಬರೂ ಎಸೆದ 8 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ 8 ಓವರ್ಗಳ ಮೂಲಕ 45 ರಿಂದ 50 ರನ್ ಮಾತ್ರ ನೀಡಿದ್ದಾರೆ.
ಇಬ್ಬರೂ ಅನುಭವಿ ವೇಗಿಗಳು ನಮ್ಮ ತಂಡದಲ್ಲಿ ಇರುವುದು ಪ್ಲಸ್ ಪಾಯಿಂಟ್. ಇದಾಗ್ಯೂ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ರೆ ಪಂದ್ಯವನ್ನು ಗೆಲ್ಲಬಹುದಿತ್ತು. ಈ ಸೋಲಿನ ಹೊರತಾಗಿಯೂ ನಾವು ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿ, ಬೌಲಿಂಗ್ ಮಾಡಿ, ಫೀಲ್ಡಿಂಗ್ ಮಾಡಿ ಪಂದ್ಯವನ್ನು ಗೆಲ್ಲುತ್ತೇವೆ. ಅಲ್ಲದೆ ಟೀಮ್ ಇಂಡಿಯಾ ತನ್ನ ಬ್ರಾಂಡ್ ಕ್ರಿಕೆಟ್ ಅನ್ನು ಆಡಲಿದೆ. ಈ ಮೂಲಕ ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.