ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ, ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ. ಈ ಬಜೆಟ್‌ನಲ್ಲಿ 56 ಸಾವಿರ ಹುದ್ದೆ ಭರ್ತಿಗೆ ನಿರ್ಧರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh lad )ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಂತೋಷ ಲಾಡ್ , ಇದೀಗ ಸಿಎಂ 56 ಸಾವಿರ ಹುದ್ದೆ ಭರ್ತಿಗೆ ನಿರ್ಧರಿಸಿದ್ದಾರೆ. ಬರವ ಬಜೆಟ್‌ನಲ್ಲಿ ಈ ಬಗ್ಗೆ ಹೇಳುತ್ತಾರೆ.ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಹುದ್ದೆ ಭರ್ತಿ ಮಾಡಿತ್ತು? ಅವರು ಒಂದೇ ಒಂದು ಹುದ್ದೆ ತುಂಬಿಲ್ಲ. ಆದರೆ ಅವರೇನು ಮಾಡಿದರು? ಬಿಜೆಪಿಯವರದ್ದು ಬರೀ ಇದೇ ನಾಟಕ. ಯುವಕರ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಈಗ ರಾಜ್ಯ ಸರಕಾರ ಹುದ್ದೆ ತುಂಬಿಕೊಳ್ಳುತ್ತೆ ಎನ್ನುವುದು ಗೊತ್ತಾಗಿದೆ. ಅದಕ್ಕಾಗಿ ಇದೀಗ ಹೋರಾಟ ಶುರು ಮಾಡಿದ್ದಾರೆ. ನಾಳೆ ಸಿಎಂ ಅನೌನ್ಸ್ ಮಾಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮಿಂದಲೇ ಇದು ಆಗಿದ್ದು ಎಂದು ಬರೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಹೋರಾಟ ಮಾಡುತ್ತಾರೆ. ಯುವಕರ ಬೇಡಿಕೆ ಸರಿಯಾಗಿಯೇ ಇದೆ.ನಾವು ಅವರೊಂದಿಗೆ ಇದ್ದೇವೆ. ಇದೀಗ ಅವರು ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದೇ ರೀತಿ ಕೇಂದ್ರದ ವಿರುದ್ಧವೂ ಹೋರಾಟ ಮಾಡಲಿ. ನಾನು ಯುವಕರಲ್ಲಿ ಮನವಿ ಮಾಡಿಕೊಳ್ಳುವೆ. ನಿಮ್ಮ ಹೋರಾಟ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದರು.