ವಾಷಿಂಗ್ಟನ್, ಫೆಬ್ರುವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅಲ್ಲಗಳೆಯುವುದನ್ನು ಮುಂದುವರಿಸಿದ್ದಾರೆ. ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಅವರು, ಕೋರ್ಟ್ ತೀರ್ಪು ಬಹಳ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅಮೆರಿಕದ ಜೊತೆ ಮಾಡಿಕೊಂಡಿರುವ ಒಪ್ಪಂದಗಳಿಂದ ಸಂತುಷ್ಟಗೊಂಡಿವೆ ಎಂದು ಟ್ರಂಪ್ ಹಂಗಿಸಿದ್ದಾರೆ.
‘ನಮ್ಮನ್ನು ಹೀನಾಯವಾಗಿ ಕಿತ್ತು ತಿನ್ನುತ್ತಿದ್ದ ದೇಶಗಳು ಈಗ ಟ್ಯಾರಿಫ್ ಪಾವತಿಸುತ್ತಿವೆ. ಅವರು ಖುಷಿಯಾಗಿದ್ದಾರೆ. ನಾವೂ ಖುಷಿಯಾಗಿದ್ದೇವೆ. ಡೆಮಾಕ್ರಾಟ್ನವರು ಇದಕ್ಕೆ ಒಪ್ಪದಿದ್ದರೂ ಅವರಿಗೆ ಗೊತ್ತಿದೆ. ಸುಪ್ರೀಂಕೋರ್ಟ್ ತೀರ್ಪು ದುರದೃಷ್ಟಕರ. ಖುಷಿ ಸುದ್ದಿ ಏನೆಂದರೆ, ಅಮೆರಿಕದ ಜೊತೆ ಒಪ್ಪಂದ ಮಾಡಿಕೊಂಡಿರುವ ದೇಶಗಳೆಲ್ಲವೂ ಅದನ್ನು ಮುಂದುವರಿಸಲು ಬಯಸುತ್ತಿವೆ,’ ಎಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್ಬಿಐ ವರದಿಯಲ್ಲಿ ಅಂದಾಜು
ಟ್ಯಾರಿಫ್ಗಳಿಂದ ಇನ್ಕಮ್ ಟ್ಯಾಕ್ಸ್ ಹೊರೆ ಇಳಿಯುತ್ತೆ ಎಂದ ಟ್ರಂಪ್
ಟ್ಯಾರಿಫ್ ವಿಧಿಸುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಇದರಿಂದ ಅಮೆರಿಕನ್ ಪ್ರಜೆಗಳಿಗೆ ಆದಾಯ ತೆರಿಗೆ ಹೊರೆ ಕಡಿಮೆ ಆಗುತ್ತೆ ಎಂದಿದ್ದಾರೆ.
‘ಕಾಲ ಕಳೆದಂತೆ ವಿದೇಶಗಳಿಂದ ಪಾವತಿಸಲಾಗುವ ಟ್ಯಾರಿಫ್ಗಳು ಆಧುನಿಕ ಆದಾಯ ತೆರಿಗೆ ಸಿಸ್ಟಂ ಅನ್ನು ಭರಿಸಬಲ್ಲುವು. ನಾನು ಪ್ರೀತಿಸುವ ಜನರಿಗೆ ಹಣದ ಹೊರೆಯನ್ನು ಇಳಿಸಬಲ್ಲುವು’ ಎಂದು ತಿಳಿಸಿದ ಡೊನಾಲ್ಡ್ ಟ್ರಂಪ್, ವಿದೇಶಗಳು ಅಮೆರಿಕನ್ನರ ಆದಾಯ ತೆರಿಗೆ ಪಾವತಿಸುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?
ಡೆಮಾಕ್ರಾಟ್ಗಳ ವಿರುದ್ಧ ಟ್ರಂಪ್ ಟೀಕೆ
‘ಡೆಮಾಕ್ರಾಟ್ಗಳು ಕೊಲೆಗಡುಕರನ್ನು ನಮ್ಮ ದೇಶದೊಳಗೆ ಬಿಟ್ಟುಕೊಂಡರು. ಅವರ ನೀತಿಗಳು ಬೆಲೆ ಏರಿಕೆಗೆ ಕಾರಣವಾದರೆ, ನಮ್ಮ ನೀತಿಗಳು ಬೆಲೆ ತಗ್ಗಿಸುತ್ತಿವೆ. ಮೊಟ್ಟೆ ಬೆಲೆ ಶೇ. 60 ಇಳಿಕೆ ಆಗಿದೆ. ಹೋಟೆಲ್, ಬಾಡಿಗೆ, ಆಟೊಮೊಬೈಲ್, ಬೀಫ್ ಬೆಲೆಗಳು ಸಾಕಷ್ಟು ಕಡಿಮೆ ಆಗಿವೆ. ವಿದ್ಯುತ್ ಬೆಲೆ ತಗ್ಗುತ್ತಿದೆ. ಮತ್ತೊಂದು ದೊಡ್ಡ ಟ್ಯಾಕ್ಸ್ ಕಡಿತದಂತಾಗಿದೆ’ ಎಂದು ಟ್ರಂಪ್ ತಿಳಿಸಿದ್ದಾರೆ.
‘ನನಗೆ ಮೊದಲು ಅಮೆರಿಕ. ನಾವು ಪ್ರೀತಿಸೋದು ಅಮೆರಿಕವನ್ನು. ಬೈಡನ್ ಹಾಗೂ ಅವರ ಭ್ರಷ್ಟ ಜೊತೆಗಾರರ ಅಡಿಯಲ್ಲಿ ಅಮೆರಿಕ ಮುರಿದುಬೀಳುವ ಹಂತಕ್ಕೆ ಹೋಗಿತ್ತು’ ಎಂದು ಟ್ರಂಪ್ ಸಿಡಿಗುಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ