Headlines

SSLC ಪಾಸ್ ಮಾಡಿಸುತ್ತೇನೆಂದು ನಂಬಿಸಿ ವಂಚಿದ ಬಂಗಾರದ ಶಿಕ್ಷಕ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ – Kannada News | Dharwad: Teacher cheats student by promising to help him pass SSLC

ಧಾರವಾಡ, ಫೆಬ್ರವರಿ 25: ವಿದ್ಯಾರ್ಥಿಯ (student) ಮುಖ್ಯ ಘಟ್ಟವೇ ಎಸ್​ಎಸ್​ಎಲ್​ಸಿ. ಅದಾದ ಮೇಲೆ ಆತನ ಬದುಕೇ ಬದಲಾಗಿ ಬಿಡುತ್ತೆ. ಅಂತಹ SSLC ಪರೀಕ್ಷೆಯನ್ನು ಉತ್ತೀರ್ಣ ಮಾಡಿಕೊಡುತ್ತೇನೆ ಅಂತಾ ಹೇಳಿ ಓರ್ವ ಶಿಕ್ಷಕ ವಿದ್ಯಾರ್ಥಿಗೆ ಮೋಸ ಮಾಡಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ. ವಿದ್ಯಾರ್ಥಿಯಿಂದ ಬಂಗಾರ ಪಡೆದು ಇದೀಗ ವಿದ್ಯಾರ್ಥಿ ಜೀವನವನ್ನೇ ಅತಂತ್ರ ಮಾಡಿದ್ದಾನೆ.

ವಿದ್ಯಾರ್ಥಿಯ ಜೀವನದಲ್ಲಿ ಚೆಲ್ಲಾಟವಾಡಿದ ಶಿಕ್ಷಕ

ಹೀಗೆ ವಿದ್ಯಾರ್ಥಿಗೆ ಚಳ್ಳೆಹಣ್ಣು ತಿನ್ನಿಸಿದ ಧಾರವಾಡದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕನಾಗಿರುವ  ಈತ, ಇದೀಗ ವಿದ್ಯಾರ್ಥಿಯ ಜೀವನದಲ್ಲಿ ಚೆಲ್ಲಾಟ ಆಡಿದ್ದಾನೆ. 10ನೇ ತರಗತಿ ವಿದ್ಯಾರ್ಥಿಯಾಗಿರೋ ನಗರದ ಶಿವನಗರ ನಿವಾಸಿ ಅಭಿಷೇಕ್​ಗೆ ಈ ಬಾರಿಯ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ನಂಬಿಸಿದ್ದಾನೆ. ಪ್ರಶ್ನೆ ಪತ್ರಿಕೆಗಳನ್ನ ಲೀಕ್ ಮಾಡಿ ಕೊಡುತ್ತೇನೆ ಅಂತ ನಂಬಿಸಿ ವಿದ್ಯಾರ್ಥಿಗೆ ಹಣದ ಬೇಡಿಕೆ ಇಟ್ಟಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ಅಭಿಷೇಕ್

ನನ್ನ ಮಗನ ಕಾಲೇಜಿನ ಫೀಸ್ ಕಟ್ಟಬೇಕು. ನಿಮ್ಮ ಮನೆಯ ಬಂಗಾರವನ್ನು ತಂದು ಕೊಡು ಅಂತ ಹೇಳಿದ್ದಾನೆ. ಅದಕ್ಕೆ ಮೊದಲು ಒಪ್ಪದ ವಿದ್ಯಾರ್ಥಿ ಬಳಿಕ ಆತನ ಮಾತನ್ನು ನಂಬಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಡಿಯೋ ಕಾಲ್ ಮೂಲಕ ಚಿನ್ನವನ್ನು ಎಲ್ಲಿ ಇಟ್ಟಿದ್ದಾರೆ ಹುಡುಕು ಎಂದು ಹೇಳಿ ಮನೆಯ ಅಲ್ಮೇರಾದಲ್ಲಿಟ್ಟಿದ್ದ 82 ಗ್ರಾಂ ಬಂಗಾರವನ್ನು ತೆಗೆದುಕೊಂಡು ಹೋಗಿ ಶಿಕ್ಷಕನಿಗೆ ಕೊಟ್ಟಿದ್ದಾನೆ ಅಂತ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯಾವಾಗ ಈ ವಿಚಾರ ತಂದೆ-ತಾಯಿಗೆ ಗೊತ್ತಾಯಿತೋ ಆಗ ಹೆದರಿಕೊಂಡ ಅಭಿಷೇಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ನನ್ನ ಲೈಫ್​​​​ ಹೇಗಾಗಿದೆ ಅಂದ್ರೆ: ಒಂದು ಕಡೆ ಅಪ್ಪ ಇಲ್ಲ, ಇನ್ನೊಂದು ಕಡೆ ಅಮ್ಮನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸ ಇಲ್ಲ

ಇನ್ನು ವಿದ್ಯಾರ್ಥಿಯ ಪೋಷಕರಿಗೆ ಈ ವಿಷಯ ಗೊತ್ತಾಗುತ್ತಲೇ ಶಿಕ್ಷಕ ಉಲ್ಟಾ ಹೊಡೆದಿದ್ದಾನೆ. ನನ್ನ ಬಳಿ ಯಾವುದೇ ಬಂಗಾರ ನೀಡಿಲ್ಲ ಎಂದು ಹೇಳುತ್ತಿದ್ದಾನೆ. ವಿದ್ಯಾರ್ಥಿ ಬಳಿ ಚಿನ್ನ ಪಡೆದು ಬ್ಯಾಂಕ್​ನಲ್ಲಿ ಅಡವಿಟ್ಟು ಬಂದಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ತೋರಿಸಿದರೂ ಧಾರವಾಡ ಉಪನಗರ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ ಅನ್ನೋದು ಪೋಷಕರ ಆರೋಪ. ಈ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಕೇಳಿದರೆ, ಪ್ರಕರಣ ದಾಖಲಿಸಲು ಸೂಚನೆ ನೀಡುತ್ತೇನೆ ಅಂತಾ ಹೇಳಿದ್ದಾರೆ.

ದೂರು ನೀಡಿದ ಪೋಷಕರು

ಸದ್ಯಕ್ಕೆ ವಿದ್ಯಾರ್ಥಿಯ ಪೋಷಕರು ಉಪನಗರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದುವರೆಗೂ ಎಫ್​ಐಆರ್​ ದಾಖಲಾಗಿಲ್ಲ. ಒಂದು ವೇಳೆ ಶಿಕ್ಷಕ ಚಿನ್ನವನ್ನು ಪಡೆದಿದ್ದು ನಿಜವಾಗಿದ್ದರೆ, ವಿದ್ಯಾರ್ಥಿಯ ಬಾಳಲ್ಲಿ ಬೆಳಕಾಗಬೇಕಿದ್ದ ಶಿಕ್ಷಕನೇ ವಿಲನ್ ಆಗಿದ್ದಾನೆ ಎನ್ನಬಹುದಾಗಿದೆ. ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ, ಸತ್ಯಾಂಶವನ್ನು ಹೊರಗೆ ತರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *