Headlines

ಲಾಭದ ಆಸೆ ತೋರಿಸಿ ಕೋಟ್ಯಾಂತರ ರೂ. ಪಂಗನಾಮ: 74 ವರ್ಷದ ವ್ಯಕ್ತಿ ಕಳೆದುಕೊಂಡ ಹಣದ ಮೊತ್ತ ಕೇಳಿದ್ರೆ ಶಾಕ್​​ ಆಗ್ತೀರ! – Kannada News | 74 Year Old Mangaluru Man Duped of 1.77 Crore in Online Investment Scam

ಮಂಗಳೂರು, ಫೆಬ್ರವರಿ 26: ಆನ್​​ಲೈನ್​​ ಹೂಡಿಕೆ ಹೆಸರಲ್ಲಿ ವಂಚಕರು ಮಕ್ಮಲ್​​ ಟೋಪಿ ಹಾಕುವ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿದ್ದರೂ ಜನರು ಮಾತ್ರ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಬಗ್ಗೆ ಪೊಲೀಸರು, ಗೃಹ ಇಲಾಖೆ ಅದೆಷ್ಟೇ ಜಾಗೃತಿ ನಡೆಸಿದರೂ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಆನ್‌ಲೈನ್ ಅಮೆರಿಕನ್ ಕಮಾಡಿಟೀಸ್ ಹೂಡಿಕೆಯಲ್ಲಿ ಹೆಚ್ಚಿನ ಲಾಭ ದೊರೆಯುವ ಆಸೆಗೆ ಬಿದ್ದ 74 ವರ್ಷದ ಮಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 1.77 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.

ವೆಂಟ್ರೇಡ್ ಎಂಬ ಕಂಪನಿಯಿಂದ ಶೋಯಬ್ ಘೌರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕಳೆದ ಡಿಸೆಂಬರ್​​ 24ರಂದು ಸಂತ್ರಸ್ತರಿಗೆ ದೂರವಾಣಿ ಕರೆ ಮಾಡಿದ್ದ. ಅಮೆರಿಕನ್ ಕಮಾಡಿಟೀಸ್ ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅವರಿಗೆ ಆಸೆ ತೋರಿಸಿದ್ದ ಆತ, ನೀವು ಭಾರತೀಯ ರೂಪಾಯಿಯಲ್ಲಿ ವರ್ಗಾಯಿಸುವ ಹಣವನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ನಿಮ್ಮ ಪರವಾಗಿ ಹೂಡಿಕೆ ಮಾಡುತ್ತೇನೆ ಎಂಬಿತ್ಯಾದಿ ಬಣ್ಣ ಬಣ್ಣದ ಮಾತುಗಳನ್ನಾಡಿ ಅವರನ್ನು ನಂಬಿಸಿದ್ದ. ಈತನ ಮಾತು  ನಿಜವಿರಬಹುದೆಂದು ಸಂತ್ರಸ್ತ ವ್ಯಕ್ತಿಯೂ ನಂಬಿದ್ದರು. ಬಳಿಕ ಆರೋಪಿ ಇಮೇಲ್, ವಾಟ್ಸ್​ಯಾಪ್​​ ಮತ್ತು ಫೋನ್ ಕರೆಗಳ ಮೂಲಕ ದೂರುದಾರರೊಂದಿಗೆ ಸಂಪರ್ಕದಲ್ಲಿದ್ದ ಹಿನ್ನೆಲೆ ಆರಂಭದಲ್ಲಿ ದೂರುದಾರರು ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಿದ್ದರು. ಆರೋಪಿ ನೀಡಿದ್ದ ಭರವಸೆಯಂತೆ ಆ ಹಣಕ್ಕೆ ಸ್ವಲ್ಪ ಮಟ್ಟಿನ ಲಾಭವೂ ದೂರುದಾರರ ಖಾತೆಗೆ ಜಮಾ ಆಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆನ್​ಲೈನ್ ಹೂಡಿಕೆ ಹೆಸರಿನಲ್ಲಿ ಭಾರಿ ವಂಚನೆ, ಬೃಹತ್ ಜಾಲ ಭೇದಿಸಿದ ಕೆಂಗೇರಿ ಪೊಲೀಸರು, 8 ಮಂದಿಯ ಬಂಧನ

ಸ್ವಲ್ಪ ಮೊತ್ತದ ಹಣ ಹೂಡಿಕೆ ಮಾಡಿದ್ದಕ್ಕೇ ಲಾಭ ಸಿಕ್ಕ ಹಿನ್ನೆಲೆ ಆರೋಪಿ ಮೇಲೆ ಮತ್ತಷ್ಟು ವಿಶ್ವಾಸ ಮೂಡಿದ ಪರಿಣಾಮ ದೂರುದಾರರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಆರೋಪಿಯು ನೀಡಿದ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ (RTGS), ಎನ್‌ಇಎಫ್‌ಟಿ (NEFT) ಹಾಗೂ ಐಎಂಪಿಎಸ್ (IMPS) ಮೂಲಕ ದೊಡ್ಡ ಮೊತ್ತಗಳನ್ನು ವರ್ಗಾಯಿಸಿದ್ದಾರೆ. ಪೊಲೀಸರ ಪ್ರಕಾರ, ಜನವರಿ 5ರಿಂದ ಫೆಬ್ರವರಿ 2ರವರೆಗೆ ಒಟ್ಟು ರೂ. 1,77,64,668.22 ಹಣ ಆತ ನೀಡಿದ್ದ ಖಾತೆಗೆ ವರ್ಗಾವಣೆ ಆಗಿದೆ. ಯಾವಾಗ ದೊಡ್ಡ ಹಣ ತನ್ನ ಕೈಸೇರಿತೋ ಆಗ ಆರೋಪಿ ತನ್ನ ನೈಜ ಬಣ್ಣವನ್ನು ದೂರುದಾರರಿಗೆ ತೋರಿಸಿದ್ದು, ಅಂತಿಮವಾಗಿ ವಂಚನೆಗೆ ಒಳಗಾಗಿರೋದನ್ನು ಅರಿತ 74 ವರ್ಷದ ವ್ಯಕ್ತಿ ಮಂಗಳೂರು ನಗರದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *