ಬೀದರ್, ಫೆಬ್ರವರಿ 27: ಅವಿರತ ಶ್ರಮಪಟ್ಟು, ಶ್ರದ್ಧೆಯಿಟ್ಟು ಮಾಡಿದರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿ ಚಿನ್ನದ ವಿದ್ಯಾರ್ಥಿಯಾಗಿದ್ದಾರೆ. ಪಶು ವೈದ್ಯಕೀಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನ (gold medals) ಬಾಚಿಕೊಂಡ ಉಡುಪಿಯ ಖುಷಿ, 6 ಚಿನ್ನದ ಪದಕ ಪಡೆದ ತುಮಕೂರಿನ ಭೂಮಿಕಾರ ಯಶೋಗಾಥೆ ಎಂತಹವರನ್ನೂ ಪ್ರೇರೇಪಿಸುತ್ತದೆ.
ಮೀನು ವ್ಯಾಪಾರಿಯ ಮಗಳು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ
ಉಡುಪಿಯ ಮಂದಾರ್ತಿ ಗ್ರಾಮದ ಖುಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ಪದವಿಯಲ್ಲಿ 16 ಚಿನ್ನದ ಪದಕವನ್ನ ಪಡೆದುಕೊಂಡು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪಾಸಾಗಿದ್ದಾರೆ. ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಖುಷಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಇದನ್ನೂ ಓದಿ: ಬೀದರ್ನ ಅದೊಂದು ಗ್ರಾಮದಲ್ಲಿ ಭೂಮಿಯಿಂದ ಹೊರಹೊಮ್ಮುತ್ತಿದೆ ವಿಚಿತ್ರ ಶಬ್ಧ
ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್ನ ವಿದ್ಯಾರ್ಥಿನಿ ಖುಷಿ, ಚಿನ್ನದ ಪದಕ ಪಡೆಯುವ ನಿಟ್ಟಿನಲ್ಲಿ ಕಷ್ಟಪಟ್ಟು ಓದಿದ್ದಾರೆ. ಆದರೆ, 16 ಚಿನ್ನದ ಪದಕಗಳು ಒಲಿದು ಬರುತ್ತವೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ‘ಖುಷಿ’ ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ ಎಂದು ಅವರು ಟಿವಿ9 ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.
ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡ ಭೂಮಿಕಾ
ಇನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ರೈತನ ಮಗಳು ಭೂಮಿಕಾ 6 ಚಿನ್ನದ ಪದಕ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಭೂಮಿಕಾ
ಭೂಮಿಕಾ ಅವರು 2024-25ನೇ ಸಾಲಿನಲ್ಲಿ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ ಬಿ.ಟೆಕ್ (ಹೈನು ತಂತ್ರಜ್ಞಾನ) ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ತಂದೆ ಕೃಷಿ ಕಾಯಕ ಮಾಡುತ್ತಿದ್ದಾರೆ, ತಾಯಿ ಕೃಷಿ ಕಾಯಕದ ಜೊತೆಗೆ ಮನೆಯ ಕೆಲಸವನ್ನ ಕೂಡ ಮಾಡಿಕೊಂಡು ಮಕ್ಕಳ ಓದುಗೆ ಪ್ರೋತ್ಸಾಹ ನೀಡಿದ ಪರಿಣಾಮ ಇಂದು ಭೂಮಿಕಾ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಾಸೆ: ಭೂಮಿಕಾ
ತನಗೆ ಆರು ಚಿನ್ನ ಪದಕ ಸಿಕ್ಕಿರುವ ಖುಷಿಯನ್ನ ಹಂಚಿಕೊಂಡಿರುವ ಭೂಮಿಕಾ, ಕಾಲೇಜಿನಲ್ಲಿ ಪ್ರಾಧ್ಯಾಪಕರ ಉತ್ತಮ ಪಾಠ, ಮನೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದ್ದರಿಂದ ನಿತ್ಯ ಆರೇಳು ತಾಸು ಓದುತ್ತಿದ್ದೆ. ಭವಿಷ್ಯದಲ್ಲಿ ಐಎಎಸ್ ಮಾಡಿ, ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಕಲಿಯುವ, ಸಾಧಿಸುವ ಛಲವಿದ್ದವರಿಗೆ ಯಾವುದು ಕಷ್ಟವಲ್ಲ. ಸಲೀಸು ಅನ್ನೋದಕ್ಕೆ ಈ ಚಿನ್ನದ ಹುಡುಗಿಯರೇ ಸಾಕ್ಷಿ. ಅಲ್ಲದೇ ಬಡತನ ಗುರಿ ಮುಟ್ಟೋಕೆ ಅಡ್ಡಿಯಾಗಲ್ಲ ಅನ್ನೋದಕ್ಕೆ ತಾಜಾ ನಿದರ್ಶನವಾಗಿದ್ದಾರೆ. ಅದೇನೇ ಇದ್ದರೂ ಈ ಚಿನ್ನದ ಹುಡುಗಿಯರ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.