ಶವ ಪತ್ತೆಯಾಗಿರುವ ಮನೆImage Credit source: Tv9 Kannada
ನೆಲಮಂಗಲ, ಫೆಬ್ರವರಿ 28: ಯುವಕನೋರ್ವನ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಸುತ್ತಿ, ರಾಡ್ನಿಂದ ಹಲ್ಲೆ ಮಾಡಿದ್ದಲ್ಲದೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾವ್ಯಾಪ್ತಿಯ ವಿಜಯಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ. ನಟರಾಜ್ ಎಂಬವರು ಬಾಡಿಗೆಗೆ ನೀಡಿದ್ದ ಮನೆಯಿಂದ ದುರ್ನಾಥ ಬರುತ್ತಿದ್ದ ಹಿನ್ನೆಲೆ ಪರೀಕ್ಷಿಸಿದಾಗ ನಾಲ್ಕೈದು ದಿನಗಳ ಹಿಂದೆಯೇ ಕೊಲೆ ಮಾಡಿರುವ ಕಾರಣ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಮೃತದೇಹ ಪತ್ತೆಯಾಗಿರುವ ಈ ಮನೆಯನ್ನು ಮಾಲಿಕ ನಟರಾಜ್ ಅವರ ಬಳಿ ಎರಡು ತಿಂಗಳ ಹಿಂದೆ ಮೋಹನ್ ಕೃಷ್ಣ ಮತ್ತು ಊರ್ವಶಿ ಎಂಬುವವರು ಬಾಡಿಗೆ ಗೆ ಪಡೆದಿದ್ದರು. ಊರ್ವಶಿ ನಾನು ಸಿನೆಮಾ ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದೆನೆ ಅಂತ ಮನೆ ಮಾಲಿಕರ ಬಳಿ ಪರಿಚಯಿಸಿಕೊಂಡಿದ್ದಳು ಎನ್ನಲಾಗಿದೆ. ಬಾಡಿಗೆ ಸಂಬಂಧ ಇನ್ನೇನು ಅಗ್ರಿಮೆಂಟ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲಿ ಮುಂದಿನ ತಿಂಗಳು ಮನೆ ಖಾಲಿ ಮಾಡಿಬಿಡ್ತೀವಿ ಎಂದು ಇವರು ತಿಳಿಸಿದ್ದರಂತೆ. ಹೀಗಾಗಿ ಮತ್ತೇನಕ್ಕೆ ಅಗ್ರಿಮೆಂಟ್ ಮಾಡಿಸೋದು ಎಂದು ಭಾವಿಸಿ ಮನೆ ಮಾಲಿಕ ನಟರಾಜ್ ಕೂಡ ಸುಮ್ಮನಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಟೆಕ್ಕಿ ಆತ್ಮಹತ್ಯೆ? ಹಸೆಮಣೆ ಏರಬೇಕಿದ್ದವಳ ದಾರುಣ ಅಂತ್ಯ
ಆ ಬಳಿಕ ನಟರಾಜ್ ಮನೆ ಬಳಿ ಬಂದಾಗೆಲ್ಲ ಬಾಗಿಲಿಗೆ ಬೀಗ ಹಾಕಿರೋದು ಕಂಡುಬರುತ್ತಿತ್ತು. ಈ ನಡುವೆ ಅಕ್ಕಪಕ್ಕದ ಮನೆಯವರು ನಟರಾಜ್ ಮಗನಿಗೆ ಫೋನ್ ಮಾಡಿ ನಿಮ್ಮ ಮನೆಯಿಂದ ಏನೋ ಕೆಟ್ಟ ವಾಸನೆ ಬರ್ತಿದೆ ಎಂದು ತಿಳಿಸಿದ್ದಾರೆ. ರವಿಕಿರಣ್ ಮನೆಗೆ ಬಂದು ನೋಡಿದಾಗ ಕೊಲೆಯಾದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಗೂ ಮುನ್ನ ಮನೆಯಲ್ಲಿ ಪಾರ್ಟಿ ನಡೆದಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಮೃತದೇಹವನ್ನು ಶಿಫ್ಟ್ ಮಾಡಲಾಗಿದೆ.
ಇನ್ನು ಕೊಲೆಯಾಗಿರುವ ವ್ಯಕ್ತಿ ಯಾರೆಂಬ ಬಗ್ಗೆ ಗುರುತು ಪತ್ತೆಯಾಗಿಲ್ಲ. ಘಟನೆ ನಡೆದು ನಾಲ್ಕೈದು ದಿನಗಳಾಗಿರುವ ಹಿನ್ನೆಲೆ ದೇಹ ಗುರುತು ಸಿಗದಷ್ಟು ಕೊಳೆತಿದ್ದು, ಈ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ. ಮನೆ ಬಾಡಿಗೆಗೆ ಪಡೆದಿದ್ದ ಊರ್ವಶಿ ಮತ್ತು ಮೋಹನ ಕೃಷ್ಣ ಗಂಡ ಹೆಂಡತಿನಾ ಎಂಬ ಅನುಮಾನ ಕೂಡ ಇದ್ದು, ಕೊಲೆಯಾದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಬೀಗ ಹಾಕಿಕೊಂಡು ಹೋಗಿರುವ ಇವರ ಬಂಧನದ ನಂತರವೇ ಉತ್ತರ ಸಿಗಬೇಕಿದೆ.
ಮಂಜುನಾಥ್ ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.