ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟಿ20 ವಿಶ್ವಕಪ್ನ ಸೂಪರ್ 8 ಸುತ್ತಿನ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಈ ಪಂದ್ಯ ಶ್ರೀಲಂಕಾಗೆ ಕೇವಲ ಔಪಚಾರಿಕವಾಗಿದೆ. ಏಕೆಂದರೆ ಈ ಸುತ್ತಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ತಂಡ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಆದರೆ ಪಾಕಿಸ್ತಾನಕ್ಕೆ ಸೆಮಿಫೈನಲ್ಗೇರುವ ಅವಕಾಶವಿರುವುದರಿಂದ ಅರ್ಹತೆ ಪಡೆಯಲು ಹೋರಾಟ ನಡೆಸಲಿದೆ. ಹೀಗಾಗಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿದಿರುವ ಪಾಕ್ ತಂಡದ ಪ್ಲೇಯಿಂಗ್ 11ನಲ್ಲಿ ಬದಲಾವಣೆಗಳಾಗಿವೆ. ಪ್ರಮುಖವಾಗಿ ಮಾಜಿ ನಾಯಕ ಬಾಬರ್ ಆಝಂರನ್ನು ಈ ನಿರ್ಣಾಯಕ ಪಂದ್ಯದಿಂದ ಹೊರಗಿಡಲಾಗಿದೆ.
ಟಾಸ್ ಗೆದ್ದ ಶ್ರೀಲಂಕಾ
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ ಮಾಜಿ ನಾಯಕ ಬಾಬರ್ ಆಝಂ, ಸೈಮ್ ಅಯೂಬ್ ಮತ್ತು ಸಲ್ಮಾನ್ ಮಿರ್ಜಾ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಮತ್ತೊಂದೆಡೆ ಶ್ರೀಲಂಕಾ ಕೂಡ ಎರಡು ಬದಲಾವಣೆಗಳನ್ನು ಮಾಡಿದೆ.
ಪಾಕ್ ಸೆಮೀಸ್ಗೇರಬೇಕೆಂದರೆ ಏನು ಮಾಡಬೇಕು?
ಪಾಕಿಸ್ತಾನ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕೆಂದರೆ, ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿ 160 ರನ್ ಗಳಿಸಿದರೆ, ಆ ಪಂದ್ಯವನ್ನು 64 ಅಥವಾ ಅದಕ್ಕಿಂತ ಹೆಚ್ಚು ರನ್ಗಳಿಂದ ಗೆಲ್ಲಬೇಕಾಗುತ್ತದೆ. ಹಾಗೆಯೇ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿ, ಶ್ರೀಲಂಕಾವನ್ನು 160 ರನ್ಗಳಿಗೆ ಕಟ್ಟಿಹಾಕಿದರೆ, ಪಂದ್ಯವನ್ನು 40+ ಎಸೆತಗಳಲ್ಲಿ ಅಥವಾ 13.1 ಓವರ್ಗಳಲ್ಲಿ ಗೆದ್ದುಕೊಳ್ಳಬೇಕಾಗಿದೆ. ಒಂದು ವೇಳ ಪಾಕಿಸ್ತಾನ ಹಾಗೆ ಮಾಡಲು ವಿಫಲವಾದರೆ, ನ್ಯೂಜಿಲೆಂಡ್ ಉತ್ತಮ ನೆಟ್ ರನ್ರೇಟ್ ಆಧಾರದ ಮೇಲೆ ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತದೆ.
ಉಭಯ ತಂಡಗಳು
ಪಾಕಿಸ್ತಾನ ತಂಡ: ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸಲ್ಮಾನ್ ಅಘಾ (ನಾಯಕ), ಖವಾಜಾ ನಫೆ, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ (ವಿಕೆಟ್ ಕೀಪರ್), ಚರಿತ್ ಅಸಲಂಕ, ಪವನ್ ರತ್ನಾಯಕೆ, ಕಮಿಂದು ಮೆಂಡಿಸ್, ದಸುನ್ ಶನಕ (ನಾಯಕ), ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.