ದಾವಣಗೆರೆ, ಮಾ.2: ಇಲ್ಲಿನ ದೇವತೆ ದುಗ್ಗಮ್ಮನ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್ನ ಮಿರ್ಜಾ ಪೈಲ್ವಾನ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಮ್ಮ ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ದಾವಣಗೆರೆಯ ಮಣ್ಣಿನ ಅಖಾಡದಲ್ಲಿ ಬೆವರಳಿಸಿದ ಮಿರ್ಜಾ, ಭಾರತೀಯರ ಪ್ರೀತಿ ಮತ್ತು ಕ್ರೀಡಾಭಿಮಾನವನ್ನು ಹಾಡಿ ಹೊಗಳಿದ್ದಾರೆ. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಫೈನಲ್ ಪಂದ್ಯವು ಭಾರೀ ಕುತೂಹಲ ಮೂಡಿಸಿತ್ತು. ಮಹಾರಾಷ್ಟ್ರದ ಪುಣೆಯ ಖ್ಯಾತ ಕುಸ್ತಿಪಟು ರವಿರಾಜ್ ಹಾಗೂ ಇರಾನ್ನ ಮಿರ್ಜಾ ನಡುವೆ ನಡೆದ ಈ ಕಾಳಗದಲ್ಲಿ ಇಬ್ಬರೂ ಸಮಬಲದ ಪೈಪೋಟಿ ನೀಡಿದರು. ರಂಭದಿಂದಲೇ ಇಬ್ಬರೂ ಪಟುಗಳು ದಾಳಿ ಮತ್ತು ಪ್ರತಿದಾಳಿಗಳ ಮೂಲಕ ವಿರಾರು ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಪಂದ್ಯವು ಸಮಬಲದಲ್ಲಿ ಅಂತ್ಯಗೊಂಡಿತು. ಸ್ಪಷ್ಟ ಜಯಶಾಲಿ ಯಾರು ಎಂಬುದು ನಿರ್ಧಾರವಾಗದಿದ್ದರೂ, ಇಬ್ಬರ ಹೋರಾಟಕ್ಕೆ ಅಭಿಮಾನಿಗಳು ಮನಸೋತು ಚಪ್ಪಾಳೆ ತಟ್ಟಿದರು. “ನನ್ನ ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದಿದ್ದರೂ, ಇಲ್ಲಿನ ಜನರ ಪ್ರೀತಿ ನನಗೆ ಧೈರ್ಯ ನೀಡಿದೆ. ಹಿಂದುಸ್ತಾನದ ಕ್ರೀಡಾಭಿಮಾನ ಮತ್ತು ಇಲ್ಲಿನ ಮಣ್ಣಿನ ಸಂಸ್ಕೃತಿ ಅದ್ಭುತ” ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ