ಕೊಲ್ಲಿ ರಾಷ್ಟ್ರಗಳು, ಇರಾನ್ನಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳ ಸಂಚಾರ ರದ್ದು!
ದೇವನಹಳ್ಳಿ, ಮಾರ್ಚ್ 03: ಇಸ್ರೇಲ್ ಮತ್ತು ಇರಾನ್ (Iran-Israel war) ನಡುವೆ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಅಂತರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪರಿಣಾಮವಾಗಿ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಹಲವು ವಿಮಾನಗಳ ಸಂಚಾರ ರದ್ದುಗೊಂಡಿದೆ.
ಯುದ್ಧದ ಹಿನ್ನೆಲೆ ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರಾತ್ರಿ ಕೆಲ ಗಂಟೆಗಳ ಕಾಲ ತೆರೆಯಲಾಗಿದ್ದ ದುಬೈ ಹಾಗೂ ಇರಾನ್ ಏರ್ಬೇಸ್ಗಳು ಮತ್ತೆ ಮುಚ್ಚಲ್ಪಟ್ಟಿವೆ. ಇದರ ಪರಿಣಾಮವಾಗಿ ದುಬೈ, ಅಬುಧಾಬಿ ಮತ್ತು ಜಿದ್ದಾ ನಗರಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ.
ಯಾವೆಲ್ಲಾ ವಿಮಾನಗಳು ರದ್ದು?
ಇಂದು (ಮಾರ್ಚ್ 03) ಬೆಳಗ್ಗೆ 8:50ಕ್ಕೆ ದುಬೈನಿಂದ ಆಗಮಿಸಬೇಕಿದ್ದ ಎಮಿರೇಟ್ಸ್ ವಿಮಾನ, 9:30ಕ್ಕೆ ಅಬುಧಾಬಿಯಿಂದ ಬರಬೇಕಿದ್ದ ಇಂಡಿಗೋ ವಿಮಾನ ಹಾಗೂ 10:45ಕ್ಕೆ ಜಿದ್ದಾದಿಂದ ಬರಬೇಕಿದ್ದ ಇಂಡಿಗೋ ವಿಮಾನಗಳು ರದ್ದುಗೊಂಡಿವೆ. ಹಾಗೆಯೇ ಬೆಂಗಳೂರಿನಿಂದ ದುಬೈಗೆ ಬೆಳಿಗ್ಗೆ 8 ಗಂಟೆಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಮತ್ತು 10:25ಕ್ಕೆ ಹೊರಡಬೇಕಿದ್ದ ಎಮಿರೇಟ್ಸ್ ವಿಮಾನಗಳ ಪ್ರಯಾಣವೂ ಸ್ಥಗಿತಗೊಂಡಿದೆ.
ಇದನ್ನೂ ಓದಿ ಮಧ್ಯಪ್ರಾಚ್ಯದಿಂದ ಭಾರತೀಯರ ಕರೆತರಲು ಕೇಂದ್ರದಿಂದ ವಿಶೇಷ ಕಾರ್ಯಾಚರಣೆ, ತೆರಳಲಿವೆ 10 ಇಂಡಿಗೋ ವಿಮಾನ
ಮುಂಜಾನೆ 4:30ಕ್ಕೆ ಕೆಐಎಬಿಯಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನವು ಭಾರತದ ಗಡಿ ದಾಟುವಷ್ಟರಲ್ಲಿ ದುಬೈ ವಾಯುನೆಲೆ ಬಂದ್ ಆಗಿರುವ ಮಾಹಿತಿ ಲಭಿಸಿದ ಹಿನ್ನೆಲೆ ಮತ್ತೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ. ಈ ವಿಮಾನದಲ್ಲಿ ಒಟ್ಟು 113 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.ಇದರಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಿದೆ.
ಯುದ್ದನಾಡಿನಿಂದ ಬಂದ ಕನ್ನಡಿಗರಿಗೆ ಏರ್ಪೋಟ್ ಸಿಬ್ಬಂದಿಯಿಂದ ಸ್ವಾಗತ
ಯುದ್ಧ ಪ್ರದೇಶಗಳಿಂದ ಬಂದ ಕನ್ನಡಿಗರನ್ನು ವಿಮಾನ ನಿಲ್ದಾಣ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ತಡರಾತ್ರಿ ಆಗಮಿಸಿದ ಪ್ರಯಾಣಿಕರಿಗೆ ತಿಂಡಿ ಹಾಗೂ ಸ್ನಾಕ್ಸ್ ಪ್ಯಾಕೆಟ್ಗಳನ್ನು ವಿತರಿಸಿ ಸಾಂತ್ವನ ನೀಡಲಾಗಿದೆ. ಅಂತರಾಷ್ಟ್ರೀಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಇನ್ನಷ್ಟು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದು, ಪ್ರಯಾಣಿಕರು ತಮ್ಮ ವಿಮಾನಗಳ ಮಾಹಿತಿಗಾಗಿ ಸಂಬಂಧಿತ ಏರ್ಲೈನ್ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.