ಪ್ರತಿ ಐಸಿಸಿ (ICC) ಈವೆಂಟ್ನಲ್ಲೂ ಕಳಪೆ ಪ್ರದರ್ಶನದ ಬಳಿಕ ಪಾಕಿಸ್ತಾನ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವುದು ಹೊಸತೆನಲ್ಲ. ಈ ಹಿಂದೆಯೂ ಐಸಿಸಿ ಪಂದ್ಯಾವಳಿಗಳನ್ನು ಸೋತ ಬಳಿಕ ಪಾಕ್ ತಂಡದ ಮುಖ್ಯ ಕೋಚ್ನಿಂದ ಹಿಡಿದು, ನಾಯಕನನ್ನು ಸಾಕಷ್ಟು ಬಾರಿ ಬದಲಿಸಲಾಗಿದೆ. ಇದೀಗ 2026 ರ ಟಿ20 ವಿಶ್ವಕಪ್ನ (T20 World Cup) ಸೂಪರ್ 8 ಹಂತದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ ಪಾಕ್ ಮಂಡಳಿ ತನ್ನ ಕೆಲಸ ಶುರು ಮಾಡಿದೆ. ಅದರಂತೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ ವಿಧಿಸಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಪಾಕ್ ತಂಡದ ಆಯ್ಕೆ ಸಮಿತಿಯಲ್ಲಿದ್ದ ಅಲೀಮ್ ದಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆ
ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಪ್ರಮುಖ ಸದಸ್ಯ ಮತ್ತು ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅಲೀಮ್ ದಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಂಡ ವಿಶ್ವಕಪ್ನಿಂದ ಹೊರಬಿದ್ದ ಬಳಿಕ ಅಲೀಮ್ ದಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಅಕ್ಟೋಬರ್ 2024 ರಲ್ಲಿ ಆಯ್ಕೆ ಸಮಿತಿಯನ್ನು ಸೇರಿದ್ದ ಅಲೀಮ್ ದಾರ್ ಪಾಕಿಸ್ತಾನದ ವಿಶ್ವಕಪ್ ವೈಫಲ್ಯದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದಾಗ್ಯೂ ಕೆಲವು ವರದಿಗಳ ಪ್ರಕಾರ, ಪಿಸಿಬಿಯೇ ಅಲೀಮ್ ದಾರ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿದೆ ಎಂದು ಹೇಳುತ್ತವೆ.
ಅಲೀಮ್ ದಾರ್ ರಾಜೀನಾಮೆ ನೀಡಿದ ನಂತರ, ಆಕಿಬ್ ಜಾವೇದ್ ಮತ್ತು ಅಸಾದ್ ಶಫೀಕ್ ಈಗ ಆಯ್ಕೆ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ. ಪರಿಣಾಮವಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶೀಘ್ರದಲ್ಲೇ ಆಯ್ಕೆ ಸಮಿತಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ ತಂಡದ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮತ್ತಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
PAK vs SL: ಟಿ20 ವಿಶ್ವಕಪ್ನಿಂದ ಹೊರಬಿದ್ದ ‘ಪ್ಯಾಕಿ’ಸ್ತಾನ; ಕಿವೀಸ್ಗೆ ಸೆಮೀಸ್ ಟಿಕೆಟ್
ಪಾಕಿಸ್ತಾನ ತಂಡದ ಪ್ರದರ್ಶನ ಹೇಗಿತ್ತು?
ಪಾಕಿಸ್ತಾನ ತಂಡವು ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾವನ್ನು ಕೇವಲ 5 ರನ್ಗಳಿಂದ ಸೋಲಿಸಿತ್ತಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಏಕೆಂದರೆ ಸೆಮಿಫೈನಲ್ಗೆ ಅರ್ಹತೆ ಪಡೆಯಲು ಪಾಕ್ ತಂಡಕ್ಕೆ ದೊಡ್ಡ ಗೆಲುವಿನ ಅಗತ್ಯವಿತ್ತು, ಆದರೆ ಅದು ಸಿಗಲಿಲ್ಲ. ಇದಕ್ಕೂ ಮೊದಲು, ಗುಂಪು ಹಂತದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಓವರ್ನಲ್ಲಿ ರೋಮಾಂಚಕ ಗೆಲುವು ಸಾಧಿಸಿತ್ತು. ನಂತರ ನಮೀಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಗೆದ್ದಿದ್ದ ಪಾಕ್, ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ 61 ರನ್ಗಳ ಹೀನಾಯ ಸೋಲು ಅನುಭವಿಸಿತ್ತು. ನಂತರ, ನ್ಯೂಜಿಲೆಂಡ್ ವಿರುದ್ಧದ ಸೂಪರ್ 8 ಪಂದ್ಯ ಮಳೆಯಿಂದ ರದ್ದಾದರೆ, ಇಂಗ್ಲೆಂಡ್ ವಿರುದ್ಧದ ಸೋಲು ತಂಡದ ಭರವಸೆಯನ್ನು ಹುಸಿಗೊಳಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:07 pm, Tue, 3 March 26