Headlines

‘ಚಿಕ್ನಿ ಚಮೇಲಿ’ ಹಾಡಿನ ವಿವಾದಕ್ಕೆ ಸ್ಪಷ್ಟನೆ ನೀಡಿದ ಗಾಯಕಿ ಶ್ರೇಯಾ ಘೋಷಾಲ್ – Kannada News | Shreya Ghoshal responds to trolling over chikni chameli and objectifying lyrics

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ‘ಚಿಕ್ನಿ ಚಮೇಲಿ’ (Chikni Chameli) ರೀತಿಯ ಹಾಡುಗಳ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ನಾನು ಇನ್ಮುಂದೆ ಇಂತಹ ಹಾಡುಗಳನ್ನು ಹಾಡುವುದಿಲ್ಲ’ ಎಂದು ಅವರು ಹೇಳಿದ್ದನ್ನು ಕೆಲವರು ಟ್ರೋಲ್ ಮಾಡಿದ್ದರು. ಈಗ ಈ ಎಲ್ಲಾ ಟ್ರೋಲ್‌ಗಳಿಗೆ ಶ್ರೇಯಾ ಖಡಕ್ ಆಗಿಯೇ ಉತ್ತರ ನೀಡಿದ್ದು, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ರಾಜ್ ಶಾಮನಿ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶ್ರೇಯಾ ಘೋಷಾಲ್ (Shreya Ghoshal), ಚಿತ್ರರಂಗದಲ್ಲಿ ಮಹಿಳೆಯರನ್ನು ಅತಿ ಹೆಚ್ಚು ಲೈಂಗಿಕವಾಗಿ ಬಿಂಬಿಸುವ ಸಾಹಿತ್ಯದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಶ್ರೇಯಾ ಘೋಷಾಲ್ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಾದ ಕೆಲವು ಮುಜುಗರದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ‘ಚಿಕ್ನಿ ಚಮೇಲಿ ಹಿಟ್ ಆದ ನಂತರ, ನನಗೆ ಅಂತಹದ್ದೇ ಅನೇಕ ಹಾಡುಗಳ ಆಫರ್ ಬಂದವು. ಒಮ್ಮೆ ನನ್ನ ಆಪ್ತ ಸಂಗೀತ ಸಂಯೋಜಕರೊಬ್ಬರು ‘ನನ್ನನ್ನು ಚಿಕನ್ ಮಾಡಿ ತಿನ್ನು’ ಎಂಬಂತಹ ಅತ್ಯಂತ ಅಶ್ಲೀಲ ಸಾಹಿತ್ಯವಿದ್ದ ಹಾಡನ್ನು ಹಾಡಲು ಕೇಳಿದ್ದರು. ಆ ಸಾಹಿತ್ಯ ಕೇಳಿಯೇ ನನಗೆ ನಾಚಿಕೆಯಾಯಿತು, ತಕ್ಷಣವೇ ಅದನ್ನು ನಿರಾಕರಿಸಿದೆ’ ಎಂದು ಶ್ರೇಯಾ ಘೋಷಾಲ್ ಅವರು ತಿಳಿಸಿದ್ದಾರೆ.

2012ರ ‘ಅಗ್ನಿಪಥ್’ ಸಿನಿಮಾದ ‘ಚಿಕ್ನಿ ಚಮೇಲಿ’ ಸೂಪರ್ ಹಿಟ್ ಹಾಡಿನ ಬಗ್ಗೆ ಮಾತನಾಡುತ್ತಾ, ‘ಆ ಸಮಯದಲ್ಲಿ ನನಗೆ ಅಷ್ಟು ಪ್ರಭುದ್ಧತೆ ಇರಲಿಲ್ಲ. ನಾನು ಏನು ಹಾಡುತ್ತಿದ್ದೇನೆ ಎಂಬುದು ಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ. ಆ ಹಾಡಿನ ಮೂಲ ಸಾಹಿತ್ಯ ಇನ್ನೂ ಗಾಢವಾಗಿತ್ತು, ನಂತರ ಅದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿತ್ತು’ ಎಂದು ಶ್ರೇಯಾ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜನರು ‘ನೀವು ಈಗಲೂ ಸಂಗೀತ ಕಾರ್ಯಕ್ರಮಗಳಲ್ಲಿ ಅದೇ ಹಾಡನ್ನು ಹಾಡುತ್ತೀರಲ್ಲವೇ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಶ್ರೇಯಾ ಅವರ ಉತ್ತರ ಹೀಗಿದೆ. ‘ಹಾಡಿನ ಬಗ್ಗೆ ಹೆಮ್ಮೆ ಇದೆ. ನನಗೆ ಆ ಹಾಡಿನ ಬಗ್ಗೆ ಯಾವುದೇ ಮುಜುಗರವಿಲ್ಲ. ನಾನು ಅದನ್ನು ಇಷ್ಟಪಡುತ್ತೇನೆ ಮತ್ತು ಅದು ನನ್ನದೇ ಹಾಡು. ಅದನ್ನು ನಾನು ಎಂದಿಗೂ ಅಲ್ಲಗಳೆಯುವುದಿಲ್ಲ. ಆದರೆ ಈಗ ನಾನು ಬದಲಾಗಿದ್ದೇನೆ. ಇನ್ನು ಮುಂದೆ ಅಂತಹ ಸಾಹಿತ್ಯವಿರುವ ಹಾಡುಗಳನ್ನು ನಾನು ರೆಕಾರ್ಡ್ ಮಾಡುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ರಾಶಿಕಾ ಸಿನಿಮಾ ಬಗ್ಗೆ ಶ್ರೇಯಾ ಘೋಷಾಲ್ ಮಾತು

‘ಒಂದು ಹಾಡು ಹಿಟ್ ಆದ ಮೇಲೆ ಅದನ್ನು ಎಲ್ಲೆಡೆ ಹಾಡಬೇಕಾಗುತ್ತದೆ. ಸಾವಿರಾರು ಮಕ್ಕಳ ಮುಂದೆ ಅಂತಹ ಹಾಡುಗಳನ್ನು ಹಾಡುವಾಗ ಅಥವಾ ಅವರು ಅದಕ್ಕೆ ಡ್ಯಾನ್ಸ್ ಮಾಡುವುದನ್ನು ನೋಡಿದಾಗ ನನಗೆ ಸಂಕೋಚವಾಗುತ್ತದೆ. ಅದಕ್ಕಾಗಿಯೇ ನಾನು ಈಗ ಹೆಚ್ಚು ಜಾಗರೂಕಳಾಗಿದ್ದೇನೆ’ ಎಂದಿದ್​ದಾರೆ ಶ್ರೇಯಾ ಘೋಷಾಲ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *