ಉಡುಪಿ, ಮಾ.4: ಬಣ್ಣಗಳ ಹಬ್ಬ ಹೋಳಿ ಅಂದ್ರೆ ಕೇವಲ ಬಣ್ಣ ಎರಚಾಟವಲ್ಲ, ಅದರಾಚೆಗಿನ ಸಾಂಸ್ಕೃತಿಕ ಶ್ರೀಮಂತಿಕೆ. ಇದೀಗ ಕರಾವಳಿ ಭಾಗವಾದ ಉಡುಪಿ ಜಿಲ್ಲೆಯ ನೆಲೆಸಿರುವ ಮರಾಠಿ ಸಮುದಾಯದವರು ತಮ್ಮ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಈ ಬಾರಿ ಅತ್ಯಂತ ವೈಭವದಿಂದ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಉಡುಪಿಯ ಚೆರ್ಕಾಡಿ ಮೈದಾನದಲ್ಲಿ ನಡೆದ ಈ ಸಂಭ್ರಮವು ತುಳುನಾಡಿನ ಜಾನಪದ ಸೊಗಡಿಗೆ ಹೊಸ ಕಲೆ ನೀಡಿದೆ. ಸುಮಾರು ಮೂರ್ನಾಲ್ಕು ಶತಮಾನಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕದ ಕಾಡು-ಮೇಡುಗಳಲ್ಲಿ ನೆಲೆಸಿದ ಮರಾಠಿ ಸಮುದಾಯದವರು ತಮ್ಮ ಮೂಲ ಆಚರಣೆಗಳನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆ.
ತಮ್ಮ ಆರಾಧ್ಯ ದೇವತೆಗಳಾದ ದುರ್ಗೆ ಮಹಾಮ್ಮಾಯಿ ಮತ್ತು ತುಳಜಾ ಭವಾನಿಯ ಹೆಸರಿನಲ್ಲಿ ಗದ್ದುಗೆ ಆರಾಧನೆ ಮಾಡಿ, ವ್ರತನಿಷ್ಠೆಯಿಂದ ಹೋಳಿ ಆಚರಿಸುತ್ತಾರೆ. ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಕಾಮದಹನ ಮಾಡುವ ಮೂಲಕ ದುಷ್ಟ ಶಕ್ತಿಗಳ ನಾಶ ಮತ್ತು ಸದ್ಗುಣಗಳ ವಿಜಯವನ್ನು ಸಾರುತ್ತಾರೆ.
ಇದನ್ನೂ ಓದಿ: ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್ಗೆ ಮುಗಿಬಿದ್ದ ಜನ
ಕಣ್ಣಿಗೆ ಮುದ ನೀಡುವ ವರ್ಣಮಯ ಸಾಂಪ್ರದಾಯಿಕ ವೇಷಭೂಷಣಗಳೇ ಈ ಹಬ್ಬದ ಅಸಲಿ ಬಣ್ಣವಾಗಿದೆ. ಮರಾಠಿ ಮತ್ತು ಕುಡ್ಬಿ ಜನಾಂಗದವರ ಜಾನಪದ ವಾದ್ಯವಾದ ‘ಗುಮ್ಟೆ’ಯ (ಚರ್ಮವಾದ್ಯ) ಝೇಂಕಾರಕ್ಕೆ ಹೆಜ್ಜೆ ಹಾಕುತ್ತಾ ಸಮುದಾಯದವರು ಸಂಭ್ರಮಿಸುತ್ತಾರೆ. ಚೆರ್ಕಾಡಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಕೂಡುಕಟ್ಟುಗಳು ಮತ್ತು 5 ಸಾವಿರಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ಜಾನಪದ ನೃತ್ಯ ಪ್ರದರ್ಶಿಸಿದರು. ಮರಾಠಿಗರ ಮೂಲ ಮಠವೆಂದೇ ನಂಬಲಾದ ಶೃಂಗೇರಿ ಮಠದ ಶ್ರೀಗಳು ಈ ವೈಭವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಶುಭಹಾರೈಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ