T20 World Cup 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಮಾ.5) ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿದೆ. ಟಿ20 ವಿಶ್ವಕಪ್ನ ಈ ನಿರ್ಣಾಯಕ ಪಂದ್ಯಕ್ಕಾಗಿ ನಿರ್ಮಿಸಲಾಗಿರುವುದು ಗ್ರೀನ್ ಪಿಚ್. ಅಂದರೆ ಪಿಚ್ ಮೇಲ್ಮೈ ಮೇಲೆ ಹಸಿರು ಹುಲ್ಲುಗಳಿವೆ. ಇದುವೇ ಈಗ ಭಾರತ ತಂಡದ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ…
ಹಸಿರು ಪಿಚ್ನಲ್ಲಿ ವೇಗಿಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಬಲ್ಲರು. ಅದರಲ್ಲಿ ಇಂಗ್ಲೆಂಡ್ ಬೌಲರ್ಗಳು ನಿಸ್ಸೀಮರು. ಇಂಗ್ಲೆಂಡ್ನ ಬಹುತೇಕ ಪಿಚ್ ಮೇಲ್ಮೈ ಹಸಿರು ಹುಲ್ಲಿನಿಂದ ಕೂಡಿರುತ್ತದೆ. ಹೀಗಾಗಿ ಅಂತಹ ಪಿಚ್ನಲ್ಲಿ ಹೇಗೆ ದಾಳಿ ಸಂಘಟಿಸಬೇಕೆಂಬುದು ಆಂಗ್ಲ ಬೌಲರ್ಗಳಿಗೆ ಚೆನ್ನಾಗಿ ಗೊತ್ತಿದೆ.
ಹಾಗೆಯೇ ಗ್ರೀನ್ ಪಿಚ್ನಲ್ಲಿ ಆಡಿದ ಅನುಭವ ಕೂಡ ಇಂಗ್ಲೆಂಡ್ ಆಟಗಾರರ ಜೊತೆಗಿದೆ. ಇದರಿಂದ ಅವರು ಬ್ಯಾಟಿಂಗ್ನಲ್ಲೂ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಇತ್ತ ಟೀಮ್ ಇಂಡಿಯಾ ಆಟಗಾರರಿಗೆ ಗ್ರೀನ್ ಪಿಚ್ನಲ್ಲಿ ಆಡಿದ ಅನುಭವ ತುಂಬಾ ಕಡಿಮೆ. ಹೀಗಾಗಿಯೇ ವಾಂಖೆಡೆ ಮೈದಾನದಲ್ಲಿ ನಿರ್ಮಿಸಲಾಗಿರುವ ಹೊಸ ಪಿಚ್ ಭಾರತೀಯರ ಆತಂಕಕ್ಕೆ ಕಾರಣವಾಗಿದೆ.
ಗ್ರೀನ್ ಪಿಚ್ ವಿಶೇಷತೆ:
- ಹಸಿರು ಹೊದಿಕೆ: ಪಿಚ್ ಮೇಲೆ ಹೆಚ್ಚಿನ ಪ್ರಮಾಣದ ಹಸಿರು ಹುಲ್ಲು ಇದೆ. ಇದು ಆರಂಭದಲ್ಲಿ ವೇಗದ ಬೌಲರ್ಗಳಿಗೆ ಹೆಚ್ಚಿನ ಸ್ವಿಂಗ್ ನೀಡುತ್ತದೆ.
- ಕೆಂಪು ಮಣ್ಣಿನ ಗುಣ: ವಾಂಖೆಡೆ ಪಿಚ್ ಕೆಂಪು ಮಣ್ಣಿನಿಂದ ಕೂಡಿದ್ದು, ಇದು ಪಂದ್ಯದ ಉದ್ದಕ್ಕೂ ಉತ್ತಮ ಬೌನ್ಸ್ ಮತ್ತು ವೇಗವನ್ನು ಕಾಪಾಡಿಕೊಳ್ಳುತ್ತದೆ.
ಇಂಗ್ಲೆಂಡ್ ತಂಡವು ಮೂಲತಃ ಇಂತಹ ಹಸಿರು ಮತ್ತು ವೇಗದ ಪಿಚ್ಗಳಲ್ಲಿ ಆಡಿ ರೂಢಿ ಮಾಡಿಕೊಂಡಿದೆ. ಅವರ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೇಮಿ ಓವರ್ಟನ್ 145-150 kmph ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಪಿಚ್ನಲ್ಲಿ ಹುಲ್ಲು ಇರುವುದರಿಂದ ಅವರಿಗೆ ಸ್ವಿಂಗ್ ಮತ್ತು ಸೀಮ್ ಮೂವ್ಮೆಂಟ್ ಹೆಚ್ಚು ಸಿಗುತ್ತದೆ.
ಇಂಗ್ಲೆಂಡ್ ತಂಡದ ಬ್ಯಾಟರ್ಗಳಾ ಫಿಲ್ ಸಾಲ್ಟ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್ ಚೆಂಡು ವೇಗವಾಗಿ ಬ್ಯಾಟ್ಗೆ ಬರುವ ಪಿಚ್ಗಳನ್ನು ಇಷ್ಟಪಡುತ್ತಾರೆ. ಹಸಿರು ಪಿಚ್ಗಳಲ್ಲಿ ಚೆಂಡು ನಿಲ್ಲದೆ ನೇರವಾಗಿ ಬ್ಯಾಟ್ಗೆ ಬರುವುದರಿಂದ ಅವರಿಗೆ ದೊಡ್ಡ ಹೊಡೆತಗಳನ್ನು ಹೊಡೆಯಲು ಸುಲಭವಾಗುತ್ತದೆ.
ವಾಂಖೆಡೆಯಲ್ಲಿ ನಿರ್ಮಿಸಲಾಗಿರುವ ಗ್ರೀನ್ ಪಿಚ್ ಇಂಗ್ಲೆಂಡ್ನ ಲಾರ್ಡ್ಸ್ ಅಥವಾ ಓವಲ್ ಮೈದಾನದ ಪರಿಸ್ಥಿತಿಯನ್ನು ಹೋಲುತ್ತದೆ. ಇದು ಅವರ ಆಟಗಾರರಿಗೆ ತಮ್ಮ ದೇಶದಲ್ಲೇ ಆಡುತ್ತಿರುವಂತಹ ಆತ್ಮವಿಶ್ವಾಸ ನೀಡುತ್ತದೆ.
ಸಾಮಾನ್ಯವಾಗಿ ಭಾರತೀಯ ಪಿಚ್ಗಳು ಒಣಗಿದ್ದರೆ ನಮ್ಮ ಸ್ಪಿನ್ನರ್ಗಳು ಟೀಮ್ ಇಂಡಿಯಾ ಸ್ಪಿನ್ನರ್ಗಳು ಪಂದ್ಯವನ್ನು ನಿಯಂತ್ರಿಸುತ್ತಾರೆ. ಆದರೆ ಹುಲ್ಲು ಹೆಚ್ಚಿದ್ದರೆ ಸ್ಪಿನ್ನರ್ಗಳಿಗೆ ಅಷ್ಟಾಗಿ ತಿರುವು ಸಿಗುವುದಿಲ್ಲ. ಇದು ಭಾರತದ ಪ್ರಮುಖ ಅಸ್ತ್ರವಾದ ಸ್ಪಿನ್ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಬಹುದು.
ಇನ್ನು ಗ್ರೀನ್ ಪಿಚ್ ಬೌಲರ್ಗಳಿಗೆ ಸಹಾಯ ಮಾಡಿದರೂ, ಬ್ಯಾಟರ್ಗಳು ಒಮ್ಮೆ ನೆಲೆಯೂರಿದರೆ ರನ್ ಗಳಿಸುವುದು ಸುಲಭ. ಆದರೆ ಅದಕ್ಕೆ ತಾಳ್ಮೆ ಇರಬೇಕಾಗುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ ಹೈ-ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.
ಗ್ರೀನ್ ಪಿಚ್ ಮಾಡಿದ್ದೇಕೆ?
ಮುಂಬೈನ ತಾಪಮಾನಕ್ಕೆ ಪಿಚ್ ಬೇಗನೆ ಒಣಗಿ ಬಿರುಕು ಬಿಡಬಾರದು ಎಂಬ ಕಾರಣಕ್ಕೆ ಐಸಿಸಿ ಕ್ಯುರೇಟರ್ಗಳು ಈ ಬಾರಿ ಹೆಚ್ಚಿನ ಹುಲ್ಲನ್ನು ಉಳಿಸಿಕೊಂಡಿದ್ದಾರೆ. ಇದರಿಂದಾಗಿ ದ್ವಿತೀಯ ಸೆಮಿಫೈನಲ್ ಪಂದ್ಯಕ್ಕೆ ಗ್ರೀನ್ ಪಿಚ್ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್
ಟಾಸ್ ಫ್ಯಾಕ್ಟರ್:
ಗ್ರೀನ್ ಪಿಚ್ ಇಂಗ್ಲೆಂಡ್ಗೆ ಅನುಕೂಲವಾಗಿದ್ದರೂ ಮುಂಬೈನಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ದ್ವಿತೀಯ ಇನಿಂಗ್ಸ್ ಆಡುವ ವೇಳೆ ಇಬ್ಬನಿ ಕಂಡು ಬರುತ್ತವೆ. ಇದರಿಂದ ಒದ್ದೆ ಚೆಂಡಿನ ಮೇಲೆ ಬೌಲರ್ಗಳಿಗೆ ಗ್ರಿಪ್ ಸಿಗುವುದಿಲ್ಲ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲಿದೆ.