ಪಂದ್ಯ ವೀಕ್ಷಿಸಲು ಹೋಗಿ ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕನೋರ್ವ 20 ಸಾವಿರ ರೂ. ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಇಂತಹದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಪಾಕಿಸ್ತಾನದ ಟೇಪ್ ಬಾಲ್ ಚಾಂಪಿಯನ್ಶಿಪ್ ಟೂರ್ನಿ. ಈ ಪಂದ್ಯದಲ್ಲಿ ಮುಲ್ತಾನ್ ಹಾಗೂ ಸಿಯಾಕೋಟ್ ತಂಡಗಳು ಮುಖಾಮುಖಿಯಾಗಿದ್ದವು.
ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಪರ ವಿಕ್ಕಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಬಾರಿಸಿದ ಸಿಕ್ಸರ್ವೊಂದು ಪ್ರೇಕ್ಷಕರಿದ್ದ ಗ್ಯಾಲರಿಗೆ ಸಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಓಡಿ ಬಂದು ಚೆಂಡು ಹಿಡಿದಿದ್ದಾರೆ.
ಓಡಿ ಬಂದ ರಭಸಕ್ಕೆ ನಿಯಂತ್ರಣ ತಪ್ಪಿದರೂ ಗ್ಯಾಲರಿ ವಿಭಜಿಸಲು ಹಾಕಿದ್ದ ಮರಗಳ ಲೈನ್ ನಡುವೆ ಹಾರಿದ್ದಾರೆ. ಇದಾಗ್ಯೂ ಚೆಂಡನ್ನು ಕೈ ಬಿಟ್ಟಿರಲಿಲ್ಲ. ಈ ಅದ್ಭುತ ಕ್ಯಾಚ್ ನೋಡಿ ಪಾಕಿಸ್ತಾನ್ ಟೇಪ್ ಬಾಲ್ ಚಾಂಪಿಯನ್ಶಿಪ್ ಆಯೋಜಕರು ಆತನಿಗೆ 20 ಸಾವಿರ ರೂ. (PKR) ಬಹುಮಾನ ನೀಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡವು 6 ಓವರ್ಗಳಲ್ಲಿ 127 ರನ್ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಯಾಲ್ಕೋಟ್ ತಂಡ 6 ಓವರ್ಗಳಲ್ಲಿ ಕೇವಲ 70 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಮುಲ್ತಾನ್ 57 ರನ್ಗಳ ಜಯ ಸಾಧಿಸಿದೆ.