ನೆಲಮಂಗಲ, ಮಾರ್ಚ್ 05: ಯುವಕರ ನಡುವಿನ ಗಲಾಟೆ ಬಿಡಿಸಲು ಹೋದ ವ್ಯಕ್ತಿಯೇ ಇಬ್ಬರಿಗೆ ಚಾಕುವಿನಿಂದ ಇರಿದ ಪರಿಣಾಮ ಓರ್ವ ಮೃತ ಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ನೆಲಮಂಗಲ ತಾಲೂಕಿನ ಗೋವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಕ್ಕಿಕುಮಾರ್ ಮೃತ ವ್ಯಕ್ತಿಯಾಗಿದ್ದು, ಓಂ ಪ್ರಕಾಶ್ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಘಟನೆ ಸಂಬಂಧ ಆರೋಪಿ ಗಿರೀಶ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಳಿ ಹಬ್ಬದ ದಿನವೇ ನಡೆದಿರುವ ಈ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಗೋವೇನಹಳ್ಳಿ ಗ್ರಾಮದ ಸಿಮೆಂಟ್ ಕಾಂಕ್ರೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾ ಮೂಲದ ಯುವಕರ ನಡುವೆಯೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಆಪರೇಟರ್ ಗೀರಿಶ್ ಎಲ್ಲರಿಗೂ ಬೈದಿದ್ದಾನೆ. ಹೀಗಾಗಿ ಒರಿಸ್ಸಾ ಹುಡುಗರು ಈತನ ಮೇಲೆ ತಿರುಗಿಬಿದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗಿರೀಶ್, ನನ್ನ ಜೊತೆಗೇ ಗಲಾಟೆ ಮಾಡುತ್ತೀರಾ ಎಂದು ಇಬ್ಬರಿಗೆ ಚಾಕು ಇರಿದಿದ್ದಾನೆ. ಘಟನೆಯಲ್ಲಿ ಒರಿಸ್ಸಾ ಮೂಲದ ವಿಕ್ಕಿಕುಮಾರ್ ಮೃತಪಟ್ಟಿದ್ದರೆ, ಓಂ ಪ್ರಕಾಶ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗಾಯಾಳುವನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ: ಬೀಗ ಹಾಕಿದ್ದ ಮನೆಯಿಂದ ಬರ್ತಿತ್ತು ದುರ್ನಾಥ; ಬಾಗಿಲು ತೆರೆದು ನೋಡಿದ್ರೆ ಕಂಡಿದ್ದು ಯುವಕನ ಬೆತ್ತಲೆ ಶವ!
ಇನ್ನು ಈ ಸಿಮೆಂಟ್ ಕಾಂಕ್ರೀಟ್ ಫ್ಯಾಕ್ಟರಿ ಡಾ.ಮಂಜುನಾಥ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದ್ದು, ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತ್ಯಾಮಗೊಂಡ್ಲು ಪೊಲೀಸರು ಆರೋಪಿ ಗಿರೀಶ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಯುವಕರ ನಡುವಿನ ಗಲಾಟೆ ಬಿಡಿಸಲು ಹೋದವನೇ ಸಿಟ್ಟಿಗೆದ್ದು ಓರ್ವನ ಕೊಲೆ ಮಾಡಿ ಮತ್ತೊಬ್ಬ ಆಸ್ಪತ್ರೆ ಸೇರಲು ಕಾರಣವಾಗಿರೋದು ಸಾರ್ವಜನಿಕರ ಹುಬ್ಬೇರಿಸಿದೆ. ಹೋಳಿ ಹಬ್ಬದ ದಿನ ಬಣ್ಣದೋಕುಳಿ ನಡೆಸುವ ಬದಲು ರಕ್ತದೋಕುಳಿ ನಡೆದಿರೋದು ಭೀತಿಯನ್ನೂ ಸೃಷ್ಟಿಸಿದೆ.
ವರದಿ: ಮಂಜುನಾಥ್ ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.