ಫೆಬ್ರವರಿ 7 ರಿಂದ ಆರಂಭವಾಗಿದ್ದ 2026 ರ ಟಿ20 ವಿಶ್ವಕಪ್ ಈಗ ಅಂತಿಮ ಹಂತವನ್ನು ತಲುಪಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದೆಡೆ ಭಾರತ ಸತತ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ನ್ಯೂಜಿಲೆಂಡ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗಾಗಿ ಎದುರು ನೋಡುತ್ತಿದೆ. ಇದರ ಜೊತೆಗೆ ಚಾಂಪಿಯನ್ ತಂಡದ ಮೇಲೆ ಕೋಟಿಗಳ ಮಳೆ ಸುರಿಸಲು ಐಸಿಸಿ ತಯಾರಿ ಮಾಡಿಕೊಂಡಿದೆ.
ಹಿಂದಿನ ಒಂಬತ್ತು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ, ಅತಿ ಹೆಚ್ಚು ಬಹುಮಾನದ ಹಣವನ್ನು 2024 ರ ಪಂದ್ಯಾವಳಿಯಲ್ಲಿ ವಿತರಿಸಲಾಯಿತು. 2024 ರ ಟಿ20 ವಿಶ್ವಕಪ್ನ ಬಹುಮಾನದ ಗಾತ್ರವನ್ನು ಐಸಿಸಿ 103 ಕೋಟಿ ರೂಗಳಿಗೆ ಏರಿಸಿತ್ತು. ಅದರಂತೆ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾಕ್ಕೆ 20.42 ಕೋಟಿ ರೂಗಳ ಬಹುಮಾನ ಸಿಕ್ಕಿತ್ತು. ಹಾಗೆಯೇ ರನ್ನರ್ ಅಪ್ ಆಗಿದ್ದ ಆಫ್ರಿಕಾ ತಂಡಕ್ಕೆ 10.67 ಕೋಟಿ ರೂ. ಬಹುಮಾನ ನೀಡಲಾಗಿತ್ತು.
2026 ರ ಟಿ20 ವಿಶ್ವಕಪ್ನ ಬಹುಮಾನದ ಹಣವನ್ನು ಐಸಿಸಿ ಇನ್ನೂ ಘೋಷಿಸಿಲ್ಲ. ಹಿಂದಿನ ಆವೃತ್ತಿಗಳನ್ನು ಪರಿಗಣಿಸಿದರೆ, ಫೈನಲ್ನ ಫಲಿತಾಂಶ ಏನೇ ಇರಲಿ, ಎರಡೂ ತಂಡಗಳು ಶ್ರೀಮಂತರಾಗುವುದು ಖಚಿತ. ಫೈನಲ್ನಲ್ಲಿ ಸೋತರೂ ಟೀಂ ಇಂಡಿಯಾ 1.28 ಮಿಲಿಯನ್ ಡಾಲರ್ (ಸುಮಾರು 12 ಕೋಟಿ ರೂ.) ಪಡೆಯುತ್ತದೆ.
2024 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡಕ್ಕೆ ಐಸಿಸಿ ಮಾತ್ರವಲ್ಲದೆ ಬಿಸಿಸಿಐ ಕೂಡ ಭರ್ಜರಿ ಬಹುಮಾನ ಘೋಷಿಸಿತ್ತು. ಅದರಂತೆ ರೋಹಿತ್ ಪಡೆಗೆ ಬಿಸಿಸಿಐ 125 ಕೋಟಿ ರೂಪಾಯಿಯನ್ನು ಪ್ರತ್ಯೇಕ ಬಹುಮಾನವಾಗಿ ನೀಡಿತ್ತು. ಆದ್ದರಿಂದ, 2026 ರಲ್ಲಿ ತಂಡವು ಮತ್ತೆ ಗೆದ್ದರೆ, ಈ ಬಾರಿಯೂ ದೊಡ್ಡ ಮೊತ್ತದ ಬಹುಮಾನ ಸಿಗಬಹುದು.
ಭಾರತ ತಂಡವು ಫೈನಲ್ನಲ್ಲಿ ಇತಿಹಾಸ ನಿರ್ಮಿಸುವ ಗುರಿಯನ್ನು ಹೊಂದಿದೆ. ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ನಲ್ಲಿ ಆಡುತ್ತಿರುವ ಮೊದಲ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟೂರ್ನಮೆಂಟ್ ಗೆಲ್ಲುವ ಅವಕಾಶವನ್ನು ಹೊಂದಿದೆ. ಇದುವರೆಗೆ ಯಾವುದೇ ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದಿಲ್ಲ. ಇದಲ್ಲದೆ, ಯಾವುದೇ ತಂಡ ಕೂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕೇರಿ ಇತಿಹಾಸ ಬದಲಿಸುವ ಇರಾದೆಯಲ್ಲಿದೆ.




