
ಬೀದರ್, ಮಾರ್ಚ್ 06: ಕಬ್ಬು (Sugarcane) ಬೆಳೆದು ಖುಷಿಯಿಂದ ಸಕ್ಕರೆ ಕಾರ್ಖಾನೆಗೆ ರೈತರು (Farmers) ಕಬ್ಬು ಹಾಕುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಹಣ ಮಾತ್ರ ರೈತರ ಕೈ ಸೇರುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬನ್ನ ಕಾರ್ಖಾನೆಗೆ ಹಾಕಿದರೆ ಕಾರ್ಖಾನೆ ಮಾಲೀಕರು ಮಾತ್ರ ರೈತರಿಗೆ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕಬ್ಬು ಹಾಕಿದ ರೈತರಿಗೆ ಹಣ ಜಮೆ ಮಾಡಿ ಎಂದು ಜಿಲ್ಲಾಧಿಕಾರಿಗಳು ನೋಟಿಸ್ ಕೊಟ್ಟರು ಸಕ್ಕರೆ ಕಾರ್ಖಾನೆಯವರು ಮಾತ್ರ ಹಣ ಹಾಕುತ್ತಿಲ್ಲ. ಹೀಗಾಗಿ ಅನ್ನದಾತರು ಹಣಕ್ಕಾಗಿ ಪರದಾಡುವಂತಾಗಿದೆ.
ರೈತರ ಹಣ ನೀಡದೇ ಕಾರ್ಖಾನೆಗಳ ಮೀನಾಮೇಷ
ಬೀದರ್ ಜಿಲ್ಲೆಯಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ಈವರೆಗೆ ಐದು ಸಕ್ಕರೆ ಕಾರ್ಖಾನೆಗಳಿಂದ 15 ಲಕ್ಷ 44 ಸಾವಿರ ರೂ ಮ್ಯಾಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. 594 ಕೋಟಿ 63 ಲಕ್ಷ ರೂ ರೈತರ ಬ್ಯಾಂಕ್ ಖಾತೆಗೆ ಸಕ್ಕರೆ ಕಾರ್ಖಾನೆಯವರು ಹಾಕಬೇಕಾಗಿದೆ. ಆದರೆ 375 ಕೋಟಿ 72 ರೂ ಮಾತ್ರ ರೈತರ ಖಾತೆಗೆ ಜಮೆ ಆಗಿದೆ. ಉಳಿದ 252 ಕೋಟಿ 90 ಲಕ್ಷ ರೂ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಹಾಕದೆ ಸಕ್ಕರೆ ಕಾರ್ಖಾನೆಯವರು ಮೀನಾಮೇಷ ಎಣಿಸುತ್ತಿದ್ದಾರೆ.
ಇದನ್ನೂ ಓದಿ: ಕಬ್ಬಿಗೆ ಗುಡ್ ಬೈ ಹೇಳಿ ಬಹುಬೇಡಿಕೆ ಬೆಳೆಯತ್ತ ಮುಖಮಾಡಿದ ಗಡಿ ಜಿಲ್ಲೆಯ ರೈತರು: ಕೈತುಂಬಾ ಲಾಭ
ಸಾಲ-ಸೋಲಾ ಮಾಡಿ ಬೆಳೆದ ಕಬ್ಬನ್ನ ಮಾರಾಟ ಮಾಡಿದರೇ ಅದರ ಹಣವನ್ನ ಮಾತ್ರ ರೈತರಿಗೆ ಕೊಡುತ್ತಿಲ್ಲ. ಇತ್ತ ರೈತರು ಮತ್ತೆ ಸಾಲದ ಮೊರೆ ಹೋಗುವ ಮೂಲಕ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ. ವರ್ಷವಿಡೀ ಕಬ್ಬನ್ನ ಬೆಳೆದಿದ್ದೇವೆ. ಗೊಬ್ಬರ, ಬೀಜ ಹೀಗೆ ಹತ್ತಾರು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದೇವೆ. ಕಬ್ಬು ಮಾರಾಟ ಮಾಡಿದ ಹಣದಲ್ಲಿ ಸಾಲ ತೀರಿಸಬೇಕು ಎಂದುಕೊಂಡು ಸಾಲ ಮಾಡಿದ್ದೇವೆ, ಆದರೆ ಸಕ್ಕರೆ ಕಾರ್ಖಾನೆಯವರು ಮಾತ್ರ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಹೀಗಾಗಿ ರೈತರು ಕಾರ್ಖಾನೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮಲ್ಲಿಕಾರ್ಜುನ್ ಅಳಲುತೋಡಿಕೊಂಡಿದ್ದಾರೆ.
ಇನ್ನು ಯಾವುದೆ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಹಾಕಿದರೆ ಎರಡು ವಾರದಲ್ಲಿ ರೈತರಿಗೆ ಕೊಡಬೇಕಾದ ಹಣವನ್ನ ಪಾವತಿ ಮಾಡಬೇಕು ಎಂಬ ನಿಯಮವಿದೆ, ಆದರೆ ಕಾರ್ಖಾನೆಗೆ ಹಣ ಹಾಕಿ ತಿಂಗಳು ಕಳೆದರೂ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಹೀಗಾಗಿ ರೈತರು ಸಾಲ ತಂದು ಕಡಲೆ, ಕುಸುಬಿ, ಜೋಳವನ್ನ ನಾಟಿ ಮಾಡಿದ್ದಾರೆ. ರಸಗೊಬ್ಬರ ಕೊಳ್ಳಲು ಹಣವಿಲ್ಲ, ಹೀಗಾಗಿ ಬೇಗ ರೈತರಿಗೆ ಕೊಡಬೇಕಾದ ಹಣವನ್ನ ಎರಡು ದಿನದಲ್ಲಿ ಕೊಡದೆ ಹೋದರೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ರೈತರ ಬೆನ್ನಿಗೆ ನಿಂತ ಜಿಲ್ಲಾಧಿಕಾರಿ
ರೈತರ ಬೆನ್ನಿಗೆ ಬೀದರ್ ಜಿಲ್ಲಾಧಿಕಾರಿ ನಿಂತುಕೊಂಡಿದ್ದು, ಎರಡು ವಾರದೊಳಗಾಗಿ ರೈತರಿಗೆ ಬಾಕಿ ಹಣ ಕೊಡದಿದ್ದರೇ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಯಿಂದ ರೈತರು ಖುಷಿ ಪಟ್ಟಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೂಡ ರೈತರಿಗೆ ಹಣ ಪಾವತಿಸುವಂತೆ ಒತ್ತಡ ಹೇರಿದ್ದಾರೆ.
ಇಷ್ಟೆಲ್ಲಾ ಆದರೂ ಇನ್ನು ರೈತರಿಗೆ ಹಣ ಮಾತ್ರ ಸಂದಾಯ ಮಾಡಲು ಕಾರ್ಖಾನೆಯ ಮಾಲೀಕರು ತಯಾರಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಶೀಘ್ರದಲ್ಲಿ ರೈತರ ಹಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಳಜಿವಹಿಸಿ ನಮಗೆ ಸೇರಬೇಕಾದ ಹಣವನ್ನ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿ ಪ್ರವೀಣ್ ಬರಗಲ್ ಹೇಳಿದ್ದಿಷ್ಟು
ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿ ಪ್ರವೀಣ್ ಬರಗಲ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರ ಜೊತೆಗೆ ಸಭೆ ಮಾಡಿದ್ದು, ರೈತರಿಗೆ ಆದಷ್ಟು ಬೇಗ ಹಣ ಹಾಕಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೀದರ್ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ
ಬೀದರ್ ಜಿಲ್ಲೆಯಲ್ಲಿ ಸಾವಿರಾರು ರೈತರು ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಯವರಿಗೆ ಕೊಟ್ಟು ಹಣ ಪಡೆಯಲಾಗದೆ ಕೈಕೈ ಹಿಚಿಕಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಬ್ಬು ಬಿತ್ತನೆಯ ಸಮಯದಲ್ಲಿ ಕಬ್ಬು ಹಾಕಲು ಸಾವಿರಾರು ರೂ ಸಾಲ ಮಾಡಿದ ಹಣವನ್ನ ಕೂಡ ರೈತರು ಸಾಲಗಾರರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಇತ್ತ ಕಬ್ಬು ತೆಗೆದುಕೊಂಡು ಹೋದ ಕಾರ್ಖಾನೆಯವರು ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಇದು ಸಹಜವಾಗಿಯೇ ರೈತರನ್ನ ಸಂಕಷ್ಟಕ್ಕೆ ತಳ್ಳಿದಂತಾಗಿದೆ.
ಕರ್ನಾಟಕದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.