
2026 ರ ಟಿ20 ವಿಶ್ವಕಪ್‌ನ ಫೈನಲ್‌ಗೆ (2026 T20 World Cup Final) ಅರ್ಹತೆ ಪಡೆದಿರುವ ಟೀಂ ಇಂಡಿಯಾ ಇದೇ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್ (India vs New Zealand) ತಂಡವನ್ನು ಎದುರಿಸಲಿದೆ. ಈ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಲು ನೋಡುತ್ತಿದ್ದರೆ, ಇತ್ತ ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲವಾದ್ದರಿಂದ, ಈ ಪಂದ್ಯ ಟೀಂ ಇಂಡಿಯಾಕ್ಕೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಅಜೇಯವಾಗಿ ಉಳಿದಿರುವ ನ್ಯೂಜಿಲೆಂಡ್ ತಂಡವನ್ನು ಮಣಿಸಬೇಕೆಂದರೆ ಟೀಂ ಇಂಡಿಯಾ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಬೇಕಿದೆ. ಹಾಗಿದ್ದರೆ, ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದನ್ನು ನೋಡುವುದಾದರೆ..
ಬ್ಯಾಟಿಂಗ್ ವಿಭಾಗ ಹೇಗಿರಲಿದೆ?
ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಭಾಗಶಃ ಎಲ್ಲರೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆರಂಭಿಕನಾಗಿ ಸಂಜು ಸ್ಯಾಮ್ಸನ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬರುವ ಇಶಾನ್ ಕಿಶನ್ ಕೂಡ ಇಡೀ ಪಂದ್ಯಾವಳಿಯಲ್ಲಿ ತಂಡದ ಪರ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರನಾಗಿದ್ದಾರೆ. ಆ ನಂತರ ಬರುವ ನಾಯಕ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಆಲ್ರೌಂಡರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಅಭಿಷೇಕ್ ಶರ್ಮಾಗೆ ಗೇಟ್ಪಾಸ್?
ಆದರೆ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿರುವುದು ಆರಂಭಿಕ ಅಭಿಷೇಕ್ ಶರ್ಮಾ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರನ್ಗಳ ಮಳೆ ಹರಿಸಿದ್ದ ಅಭಿಷೇಕ್, ಟಿ20 ವಿಶ್ವಕಪ್ ಆರಂಭದ ಬಳಿಕ ಕಳಪೆ ಫಾರ್ಮ್ಗೆ ಸಿಲುಕಿ ನರಳುತ್ತಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಅಭಿಷೇಕ್ರಿಂದ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿದಿದೆ. ಉಳಿದಂತೆ ಮೂರು ಪಂದ್ಯಗಳಲ್ಲಿ ಅಭಿಷೇಕ್ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೆಲ್ಲ ಸಾಲದೆಂಬಂತೆ ಸೆಮಿಫೈನಲ್ ಪಂದ್ಯದಲ್ಲೂ ಅಭಿಷೇಕ್ ತಮ್ಮ ಫಾರ್ಮ್ ಕಂಡುಕೊಳ್ಳಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಬೇಕೆಂಬ ಕೂಗು ಜೋರಾಗಿದೆ. ಆದಾಗ್ಯೂ ಫೈನಲ್ ದೃಷ್ಟಿಯಿಂದ ಅಭಿಷೇಕ್ರನ್ನು ಹೊರಗಿಡುವ ಸಾಹಸಕ್ಕೆ ಆಯ್ಕೆ ಮಂಡಳಿ ಕೈಹಾಕುವ ಸಾಧ್ಯತೆಗಳಿಲ್ಲ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ
ಇನ್ನು ಬೌಲಿಂಗ್ ವಿಭಾಗದಲ್ಲೂ ಬೌಲರ್ಗಳು ಕೊಂಚ ದುಬಾರಿಯಾದರೂ ಸಂದರ್ಭಕ್ಕೆ ಅನುಸಾರವಾಗಿ ತಂಡಕ್ಕೆ ನೆರವಾಗುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅಂದರೆ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆದರೆ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ದುಬಾರಿಯಾಗುತ್ತಿರುವುದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಅಭಿಷೇಕ್ ಶರ್ಮಾ ಜೊತೆಗೆ ವರುಣ್ ಚಕ್ರವರ್ತಿಯನ್ನು ಹೊರಗಿಟ್ಟು, ಅವರ ಬದಲಿಗೆ ಕುಲ್ದೀಪ್ ಯಾದವ್ಗೆ ಅವಕಾಶ ನೀಡಬೇಕೆಂಬ ಕೂಗು ಜೋರಾಗಿದೆ. ಆದರೆ ಕೊನೆಯ ಪಂದ್ಯದಿಂದ ವರುಣ್ರನ್ನು ಹೊರಗಿಡುವ ಸಾಧ್ಯತೆಗಳಿಲ್ಲ. ಇದರರ್ಥ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.
T20 World Cup 2026: ಗೆಲ್ಲುವ ಸಾಧ್ಯತೆ ಶೇ. 10; ಚಾಂಪಿಯನ್ ತಂಡವನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್
ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಶ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ