ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ: ಮಾ 12ರಂದು ಕನ್ನಡ ಶಾಲೆಗಳ ಬಂದ್​​ಗೆ ವಾಟಾಳ್​ ನಾಗರಾಜ್​ ಕರೆ ​

ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ: ಮಾ 12ರಂದು ಕನ್ನಡ ಶಾಲೆಗಳ ಬಂದ್​​ಗೆ ವಾಟಾಳ್​ ನಾಗರಾಜ್​ ಕರೆ ​

ಮೈಸೂರು, ಮಾರ್ಚ್​ 08: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಷೇಧಿಸಲಾಗಿದೆ. ತಮ್ಮ 17ನೇ ದಾಖಲೆಯ ಬಜೆಟ್​ ವೇಳೆ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ (Vatal Nagaraj) ಪ್ರತಿಕ್ರಿಯಿಸಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ. ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಮಕ್ಕಳನ್ನ ಜೈಲಿಗೆ ಹಾಕುವುದಕ್ಕೆ ಆಗುತ್ತಾ? 

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್, ಮನೆಯಲ್ಲಿ ಮಕ್ಕಳು ಅವರ ಅಪ್ಪ, ಅಮ್ಮನ ಮೊಬೈಲ್ ಎತ್ತಿಕೊಂಡು ನೋಡುತ್ತಾರೆ. ಅವರನ್ನು ಏನು ಮಾಡಲು ಆಗುತ್ತೆ, ಜೈಲಿಗೆ ಹಾಕುವುದಕ್ಕೆ ಆಗುತ್ತಾ? ಕೊರೊನಾ ಸಂದರ್ಭದಲ್ಲಿ ಆನ್​ಲೈನ್ ಕ್ಲಾಸ್ ಏಕೆ ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಸರ್ಕಾರದ ನಡೆಗೆ ಬಿಜೆಪಿ ರಾಜ್ಯಸಭೆ ಸದಸ್ಯ ಮೆಚ್ಚುಗೆ

ಮೊಬೈಲ್ ಜಗತ್ತಿನ ಮಾಹಿತಿ ತಿಳಿಯಲು ವಿದ್ಯಾರ್ಥಿಗಳಿಗೆ ಅನುಕೂಲ. ಮೊಬೈಲ್ ಬ್ಯಾನ್ ಅಥವಾ ಸಾಮಾಜಿಕ ಜಾಲತಾಣ ನಿಷೇಧ ಸರಿಯಲ್ಲ. ಸರ್ಕಾರದ ಈ ಆದೇಶ ಹಿಂಪಡೆಯಬೇಕು ಎಂದು ವಾಟಾಳ್​ ನಾಗರಾಜ್ ಒತ್ತಾಯಿಸಿದ್ದಾರೆ.

ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ

ಇನ್ನು ಬಜೆಟ್​ನಲ್ಲಿ ಕನ್ನಡ ಶಾಲೆಗಳ ಕಡೆಗಣನೆ ಹಿನ್ನೆಲೆ ಇದನ್ನ ಖಂಡಿಸಿ ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್ ಮಾಡುತ್ತೇವೆ. ಮೈಸೂರಿನ ಜಯ ಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಂಗ್ಲಿಷ್ ಶಾಲೆಗಳಿಗೆ 3900 ಕೋಟಿ ರೂ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka Budget 2026:16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ! ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ಸಿದ್ದರಾಮಯ್ಯ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇಲ್ಲ. ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಡಬೇಕಿತ್ತು. ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಮಾ.12 ರಂದು ಎಲ್ಲಾ ಕನ್ನಡ ಶಾಲೆಗಳ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್​ನಲ್ಲಿ ಇರುವವರು ಭ್ರಷ್ಟರು

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯರನ್ನು ಬಿಟ್ಟರೆ ಉತ್ತಮ ವ್ಯಕ್ತಿ ಯಾರಿದ್ದಾರೆ? ಬಿಜೆಪಿ, ಜೆಡಿಎಸ್​ನಲ್ಲಿ ಇರುವವರು ಭ್ರಷ್ಟರು. ಈಗ ಇರುವವರಲ್ಲಿ ಸಿದ್ದರಾಮಯ್ಯ ಅವರೇ ಉತ್ತಮ ವ್ಯಕ್ತಿ. ಅವರನ್ನ ಕೆಳಗಿಳಿಸುವುದಕ್ಕೆ ಯಾರಿಂದಲೂ ಆಗಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *