
ಅಹ್ಮದಾಬಾದ್, ಮಾರ್ಚ್ 8: ತಮ್ಮ ಜೀವನ ಹಾಗೂ ಮೌಲ್ಯಗಳು ರೂಪುಗೊಳ್ಳಲು ಕಾರಣರಾದ ಮಹಿಳೆಯರನ್ನು ಗೌತಮ್ ಅದಾನಿ (Gautam Adani) ಇವತ್ತಿನ ಮಹಿಳೆಯರ ದಿನದಂದು (International Women’s Day) ಸ್ಮರಿಸಿಕೊಂಡಿದ್ದಾರೆ. ತಮ್ಮ ಸಾಕ್ಷಿಪ್ರಜ್ಞೆ ರೂವಾರಿಗಳೆಂದು ಆ ಮಹಿಳೆಯರನ್ನು ಬಣ್ಣಿಸಿದ್ದಾರೆ. ಲಿಂಕ್ಡ್ಇನ್ನಲ್ಲಿ ಭಾವುಕವಾದ ಪೋಸ್ಟ್ವೊಂದನ್ನು ಹಾಕಿರುವ ಗೌತಮ್ ಅದಾನಿ, ತಮ್ಮ ಕುಟುಂಬದಲ್ಲಿನ ಮಹಿಳೆಯರ ಪ್ರಭಾವ ತಮಗೆ ಅದೆಷ್ಟು ಗಾಢವಾಗಿ ಆಗಿತ್ತು ಎಂದು ವಿವರಿಸಿದ್ದಾರೆ. ತಮ್ಮ ಜೀವನ, ಜವಾಬ್ದಾರಿ, ರಾಷ್ಟ್ರ ನಿರ್ಮಾಣ ವಿಚಾರದಲ್ಲಿ ಹೊಸ ದೃಷ್ಟಿಕೋನ ಸಿಗಲು ಇವರ ಪಾತ್ರ ಮಹತ್ವದ್ದೆಂದು ಹೇಳಿಕೊಂಡಿದ್ದಾರೆ.
ಅಮ್ಮನಿಂದ ಅದಾನಿಗೆ ಸಿಕ್ಕ ಶಕ್ತಿ
ಎಲ್ಲಾ ಮಕ್ಕಳಿಗೂ ತಾಯಿಯೇ ಮೊದಲ ಗುರು. ಅಂತೆಯೇ ಗೌತಮ್ ಅದಾನಿ ಅವರಿಗೂ ತಾಯಿಯೇ ಮೊದಲು ಗುರು. ಅವರ ಅಮ್ಮನ ಪ್ರಭಾವ ಅಚ್ಚಳಿಯದೇ ಉಳಿದಿದೆ. ಭಾರತದ ಪುರಾಣ ಕಥೆಗಳನ್ನು ಅಮ್ಮನಿಂದ ಕೇಳುತ್ತಾ ಬೆಳೆದವರು ಅದಾನಿ. ಆ ಕಥೆಗಳು ಪಠ್ಯಪುಸ್ತಕಗಳಿಗಿಂತ ಬಹಳ ಉನ್ನತ ಮೌಲ್ಯಗಳನ್ನು ತಂದುಕೊಡುತ್ತವೆ. ತಮಗೆ ಧೈರ್ಯ, ತ್ಯಾಗ, ಕರ್ತವ್ಯ ಮತ್ತು ನಂಬಿಕೆಯ ಬೀಜಗಳು ಬಿತ್ತಿದ್ದು ಅಮ್ಮ ಹೇಳುತ್ತಿದ್ದ ಈ ಕಥೆಗಳೇ ಎಂದು ಅದಾನಿ ಸ್ಮರಿಸಿಕೊಂಡಿದ್ದಾರೆ.
ಸ್ವಂತವಾಗಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿ 16ರ ವಯಸ್ಸಿನಲ್ಲಿ ಮನೆ ತೊರೆದು ಮುಂಬೈಗೆ ಹೋಗಿದ್ದು, ಹಾಗು ಅಸ್ಪಷ್ಟ ಭವಿಷ್ಯದ ಜಗತ್ತಿಗೆ ಮಗನನ್ನು ಕಳುಹಿಸಿಕೊಡಲು ತನ್ನ ತಾಯಿ ಅದೆಷ್ಟು ಧೈರ್ಯ ಹೊಂದಿದ್ದಿರಬೇಕು ಎಂದು ಅದಾನಿ ಕೇಳಿದ್ದಾರೆ.
ಇದನ್ನೂ ಓದಿ: ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು
ಪತ್ನಿಯನ್ನು ಹೊಗಳಿದ ಅದಾನಿ
ಗೌತಮ್ ಅದಾನಿ ಅವರು ತಮ್ಮ ಪತ್ನಿ ಪ್ರೀತಿ ಅದಾನಿಯನ್ನು ‘ನನ್ನ ಆತ್ಮಸಾಕ್ಷಿಯ ಪಾಲಕಿ’ ಎಂದು ವರ್ಣಿಸಿದ್ದಾರೆ. ದಂತವೈದ್ಯೆಯಾಗಿರುವ ಪ್ರೀತಿ ಅದಾನಿ ಅವರು ಅದಾನಿ ಫೌಂಡೇಶನ್ ಸ್ಥಾಪಿಸಿ 22 ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಸುಸ್ಥಿರ ಜೀವನ, ಸಮುದಾಯ ಅಭಿವೃದ್ಧಿ ಮೂಲಕ ಕೋಟಿಗೂ ಅಧಿಕ ಜನರ ಬದುಕನ್ನು ಬದಲಿಸಿದ ಶಕ್ತಿಯಾಗಿದ್ದಾರೆ.
ಸೊಸೆಯಂದಿರಿಂದ ಹೊಸ ದೃಷ್ಟಿಕೋನ
ಗೌತಮ್ ಅದಾನಿ ತಮ್ಮ ಇಬ್ಬರು ಸೊಸೆಯಂದಿರಾದ ಪರಿಧಿ ಮತ್ತು ದಿವಾ ಅವರಿಬ್ಬರನ್ನೂ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಶಂಸಿಸಿದ್ದಾರೆ. ಇಬ್ಬರೂ ಕೂಡ ಕುಟುಂಬಕ್ಕೆ ಹೊಸ ದೃಷ್ಟಿಕೋನ ಮತ್ತು ಸಾಧನೆ ತಂದಿದ್ದಾರೆ ಎಂದಿದ್ದಾರೆ. ಪರಿಧಿಯವರು ಒಬ್ಬ ವಕೀಲೆ. ದಿವಾ ಅವರು ಸೃಜನಶೀಲ ವಿನ್ಯಾಸಕಿಯಾಗಿದ್ದು, ವಿಶೇಷ ಚೇತನ ಜನರಿಗೆ ನೆರವಾಗುತ್ತಿದ್ದಾರೆ.
ಅದಾನಿ ಮೇಲೆ ಮೊಮ್ಮಕ್ಕಳ ಪ್ರಭಾವ
ತಮ್ಮ ಮೂವರು ಹೆಣ್ಣು ಮೊಮ್ಮಕ್ಕಳು ತಮಗೆ ಇತ್ತ ಸಂತೋಷವನ್ನು ಅದಾನಿ ಸ್ಮರಿಸಿದ್ದಾರೆ. ಕೆಲಸದ ಒತ್ತಡವನ್ನು ಈ ಹುಡುಗಿಯರಿಂದ ಮರೆಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ
‘ಒಬ್ಬ ಪುರುಷ ತನ್ನ ಜೀವನವನ್ನು ಪೋರ್ಟ್, ಏರ್ಪೋರ್ಟ್, ವಿದ್ಯುತ್ ಘಟಕ, ಬ್ಯುಸಿನೆಸ್ಗಳನ್ನು ಕಟ್ಟಲು ಕಳೆದಿರುತ್ತಾನೆ. ಆದರೆ, ಒಂದು ಮೊಮ್ಮಗು ಬಂದು ತೊಡೆ ಏರಿ ಪೂರ್ಣ ನಂಬಿಕೆಯಿಂದ ಆತನನ್ನು ಕಂಡಾಗ, ಆ ಪುರುಷನಿಗೆ ತಾನೇಕೆ ಕಟ್ಟುತ್ತಿದ್ದೇನೆ ಎಂದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಲಿಂಕ್ಡ್ಇನ್ ಪೋಸ್ಟ್ನಲ್ಲಿ ಅದಾನಿ ಬರೆದುಕೊಂಡಿದ್ದಾರೆ.
‘ಜೀವನದ ಅತಿ ಭದ್ರ ಬುನಾದಿಯನ್ನು ಯಾವುದೇ ಉಕ್ಕು ಅಥವಾ ಕಾಂಕ್ರೀಟ್ನಿಂದ ಹಾಕಲಾಗುವುದಿಲ್ಲ. ನಮ್ಮನ್ನು ರೂಪಿಸುವ ಜನರು ಈ ಬುನಾದಿ ನಿರ್ಮಿಸುತ್ತಾರೆ. ನನ್ನ ಪ್ರಯಾಣವನ್ನು ಈ ಜಗತ್ತು ನೆನಪಲ್ಲಿ ಇಟ್ಟುಕೊಳ್ಳುತ್ತದೆ ಎಂದಾದರೆ ಅದು ಇದನ್ನೇ ಎಂದು ಭಾವಿಸುತ್ತೇನೆ’ ಎಂದು ಬಹಳ ಭಾವನಾತ್ಮಕವಾಗಿ ಅದಾನಿ ತಮ್ಮ ಬರಹವನ್ನು ಮುಗಿಸಿದ್ದಾರೆ.
ಗೌತಮ್ ಅದಾನಿ ಅವರ ಲಿಂಕ್ಡ್ಇನ್ ಪೋಸ್ಟ್ನ ಲಿಂಕ್ ಇಲ್ಲಿದೆ