
ಬೆಂಗಳೂರು, ಮಾರ್ಚ್ 9: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಮಾರ್ಚ್ 8ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಗಮನ ಸೆಳೆಯಿತು. ಇದರ ಭಾಗವಾಗಿ ಬೆಂಗಳೂರು ಮತ್ತು ಮೈಸೂರು ಮಾರ್ಗದಲ್ಲಿ ಭಾನುವಾರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೊ ಪೈಲಟ್, ಟಿಟಿ (ಟಿಕೆಟ್ ಪರಿಶೀಲಕರು) ಸೇರಿದಂತೆ ರೈಲಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಮಹಿಳೆಯರ ಸಾಧನೆ ಮತ್ತು ಅವರ ಪಾತ್ರವನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದ ಸಂಭ್ರಮದ ಕ್ಷಣಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನೈಋತ್ಯ ರೈಲ್ವೆ ಹಂಚಿಕೊಂಡಿದೆ.