ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ಬೆಂಗಳೂರು, ಮಾರ್ಚ್ 9: ಮಧ್ಯಪ್ರಾಚ್ಯದಲ್ಲಿ ದಿನೇ ದಿನೇ ಇಸ್ರೇಲ್-ಇರಾನ್ ಯುದ್ಧದ (Israel Iran War) ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಹಂತಹಂತವಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ. ಮಾರ್ಚ್ 8 ರ ಭಾನುವಾರ ರಾತ್ರಿ ದುಬೈನಿಂದ ಹೊರಟ ಎಮಿರೇಟ್ಸ್ ವಿಮಾನದಲ್ಲಿ 288 ಮಂದಿ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದರು. ಯುದ್ಧದ ಆತಂಕದಿಂದಾಗಿ ಹಲವು ದಿನಗಳಿಂದ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಇದೀಗ ವಿಮಾನ ಸೇವೆಗಳು ತಾತ್ಕಾಲಿಕ ಪುನರಾರಂಭವಾದ ಬೆನ್ನಲ್ಲೇ ತಾಯ್ನಾಡಿಗೆ ಮರಳುತ್ತಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿ ಸುರಕ್ಷಿತವಾಗಿ ಭಾರತಕ್ಕೆ, ವಿಶೇಷವಾಗಿ ಬೆಂಗಳೂರಿಗೆ (Bangalore) ಬಂದಿರುವ ಮಾಹಿತಿ ಲಭ್ಯವಾಗಿದೆ.

ದುಬೈನಿಂದ ಮರಳಿದ ಸುಷ್ಮಾ ಎಂಬವರು ಮಾತನಾಡಿ, ‘ದುಬೈನಲ್ಲಿ ಸಾಮಾನ್ಯವಾಗಿ ಎಲ್ಲವೂ ಸುರಕ್ಷಿತವಾಗಿಯೇ ಇತ್ತು. ಆದರೆ ಕೆಲವೊಮ್ಮೆ ಸ್ಫೋಟದ ಶಬ್ದಗಳು ಕೇಳಿಬರುತ್ತಿದ್ದರಿಂದ ಆತಂಕ ಉಂಟಾಗುತ್ತಿತ್ತು’ ಎಂದು ಅನುಭವವನ್ನು ಹಂಚಿಕೊಂಡರು.

ಇನ್ನೊಬ್ಬ ಪ್ರಯಾಣಿಕ ಅಹ್ಮದ್ ಖಾನ್ ಮಾತನಾಡಿ, ‘ಒಮ್ಮೆ ನಾವು ಊಟ ಮಾಡಿ ಮನೆಗೆ ಬರುತ್ತಿದ್ದಾಗ ನಮ್ಮ ಮನೆ ಹಿಂಭಾಗದಲ್ಲೇ ಡ್ರೋನ್ ದಾಳಿ ನಡೆದಿತ್ತು. ಅದರಿಂದ ತುಂಬಾ ಭಯವಾಯಿತು’ ಎಂದು ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಇದನ್ನೂ ಓದಿ: “ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್​​​ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಒಟ್ಟಾರೆ ದುಬೈನಲ್ಲಿ ದೊಡ್ಡ ಮಟ್ಟದ ತೊಂದರೆ ಎದುರಾಗಿಲ್ಲ ಎಂದು ಮರಳಿದವರು ಹೇಳಿದರೂ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಯಾವಾಗ ಹೇಗೆ ತಿರುವು ಪಡೆಯುತ್ತದೆ ಎನ್ನುವುದು ತಿಳಿಯದ ಹಿನ್ನೆಲೆಯಲ್ಲಿ ಅನೇಕರು ಮುಂಜಾಗ್ರತಾ ಕ್ರಮವಾಗಿ ತಾಯ್ನಾಡಿಗೆ ಮರಳುತ್ತಿರುವುದು ಕಂಡುಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *