
ಕಾರವಾರ, ಮಾರ್ಚ್ 09: ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲಿ ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಪರಿಣಾಮ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್ನಿಂದ ಕಾರವಾರದ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ತಿಂಗಳಿಗೆ 80 ಲಕ್ಷ ರೂ.ಗಳವರೆಗೂ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.
ಡೀಸೆಲ್ ಸರಬರಾಜಿಗೂ ಸಂಕಷ್ಟ
ಸಾಮಾನ್ಯವಾಗಿ ಪ್ರತಿ ತಿಂಗಳು ಇರಾನ್ನಿಂದ ಕಚ್ಚಾ ಡಾಂಬರ್ ಸಾಗಣೆ ಹಡಗುಗಳು ಕಾರವಾರ ಬಂದರಿಗೆ ಆಗಮಿಸುತ್ತಿದ್ದವು. ಆದರೆ ಯುದ್ಧ ಪರಿಸ್ಥಿತಿಯಿಂದ ಈಗ ಹಡಗುಗಳು ಬಾರದ ಕಾರಣ ಬಂದರು ಬಿಕೋ ಎನ್ನುತ್ತಿದೆ. ಇದರಿಂದ ಗಲ್ಪ್ ರಾಷ್ಟ್ರಗಳಿಂದ ಬರುತ್ತಿದ್ದ ಡೀಸೆಲ್ ಸರಬರಾಜಿಗೂ ಸಂಕಷ್ಟ ಉಂಟಾಗಿದೆ. ಕಾರವಾರದ ಕದಂಬ ನೌಕಾ ನೆಲೆಗೆ ಅಗತ್ಯವಿರುವ ಡೀಸೆಲ್ ಅನ್ನು ಈಗ ಮುಂಬೈಯಿಂದ ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬಂದರು ವಾಣಿಜ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದ್ದ ಲಾರಿ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ ಜಗತ್ತಿಗೇ ಕಂಟಕವಾಗಲಿದೆ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!
ಕಚ್ಚಾ ಡಾಂಬರ್ ಸಾಗಣೆಗಾಗಿ ಬಂದಿದ್ದ ಲಾರಿಗಳು ಕಾರವಾರ ವಾಣಿಜ್ಯ ಬಂದರು ಬಳಿ ಸಾಲುಗಟ್ಟಿ ನಿಂತಿದ್ದು, ಕಳೆದ ಹತ್ತು ದಿನಗಳಿಂದ ಕೆಲಸವಿಲ್ಲದೇ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಡಗು ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಂದರಿಗೆ ಪ್ರತಿ ತಿಂಗಳು ಸುಮಾರು 70 ರಿಂದ 80 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ಬಂದರು ಆಧಾರಿತ ವ್ಯಾಪಾರಿಗಳು ಹಾಗೂ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.