
ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಶೂಟಿಂಗ್ ಸೆಟ್ನಿಂದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ (Sai Pallavi) ಅವರ ಫೋಟೋಗಳು ಸೋರಿಕೆಯಾಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಈ ಫೋಟೋಗಳು ಅಸಲಿಯಲ್ಲ, ಬದಲಾಗಿ ಇವು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ನಕಲಿ ಚಿತ್ರಗಳು ಎಂಬುದು ಈಗ ದೃಢಪಟ್ಟಿದೆ. ಈ ಮೊದಲು ಶೂಟಿಂಗ್ ಸೆಟ್ನಿಂದ ನಿಜವಾಗಿಯೂ ಒಂದು ಫೋಟೋ ಲೀಕ್ ಆಗಿತ್ತು. ಆದರೆ ಈ ಬಾರಿ ವೈರಲ್ ಆಗಿರುವ ಫೋಟೋ ನಿಜವಲ್ಲ ಎಂದು ನಟ ಆಶಿಶ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ರಾಜಪೋಷಾಕಿನಲ್ಲಿ ಮಿಂಚುತ್ತಿರುವ ಕೆಲವು ಫೋಟೋಗಳು ಹರಿದಾಡಿದ್ದವು. ಇದು ಸಿನಿಮಾದಲ್ಲಿ ಬರುವ ವಿವಾಹದ ದೃಶ್ಯದ ಫೋಟೋಗಳು ಎಂದು ಹಲವರು ನಂಬಿದ್ದರು. ಆದರೆ, ಫೋಟೋಗಳ ಉತ್ತಮ ಗುಣಮಟ್ಟವನ್ನು ಕಂಡು ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಲೀಕ್ ಆದ ಫೋಟೋ ಇಷ್ಟು ಕ್ಲಿಯರ್ ಆಗಿರಲ್ಲ ಎಂದು ಕಮೆಂಟ್ ಮಾಡಿದರು.
ಈ ಗೊಂದಲಕ್ಕೆ ತೆರೆ ಎಳೆದವರು ಖ್ಯಾತ ಟಿವಿ ನಟ ಆಶಿಶ್ ಶರ್ಮಾ. 2015-16ರಲ್ಲಿ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತಾ ಕೆ ರಾಮ್’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಆಶಿಶ್ ಅವರು ವೈರಲ್ ಆಗಿರುವ ಫೋಟೋಗಳು ತಮ್ಮ ಹಳೆಯ ಧಾರಾವಾಹಿಯ ದೃಶ್ಯಗಳೇ ಎಂದು ಸ್ಪಷ್ಟಪಡಿಸಿದ್ದಾರೆ. ‘ಇಲ್ಲಿದೆ ನೋಡಿ ಮತ್ತೊಂದು ಒರಿಜಿನಲ್ ಲೀಕ್ಡ್ ಫೋಟೋ. ಎಐ ತಂತ್ರಜ್ಞಾನಕ್ಕೆ ನನ್ನ ಕೂದಲನ್ನು ಬದಲಾಯಿಸಲು ಸಾಧ್ಯವಾಗಿಲ್ಲ’ ಎಂದು ಆಶಿಶ್ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ, ತಮ್ಮ ಮುಖಕ್ಕೆ ರಣಬೀರ್ ಮುಖವನ್ನು ಫೇಸ್-ಸ್ವಾಪ್ ಮಾಡಿರುವುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ.
‘ರಾಮಾಯಣ’ ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ), ರಾಕಿಂಗ್ ಸ್ಟಾರ್ ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಎಂದು ಹೇಳಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತ ‘ಪ್ರೈಮ್ ಫೋಕಸ್’ ಸಂಸ್ಥೆಯು ಇದರ ವಿಎಫ್ಎಕ್ಸ್ ಜವಾಬ್ದಾರಿ ಹೊತ್ತಿದೆ.
ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?
ಈ ಸಿನಿಮಾ ಎರಡು ಪಾರ್ಟ್ಗಳಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಕಾಣುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಲೀಕ್ ಆಗಿರುವ ಫೋಟೋಗಳನ್ನು ನೋಡಿ ಸಂಭ್ರಮಿಸಿದ್ದ ಅಭಿಮಾನಿಗಳಿಗೆ ಇದು ಕೇವಲ ಫ್ಯಾನ್-ಮೇಡ್ ಎಡಿಟ್ ಎಂಬ ವಿಷಯ ಸ್ವಲ್ಪ ನಿರಾಸೆ ಮೂಡಿಸಿದೆ. ಚಿತ್ರತಂಡ ಅಧಿಕೃತವಾಗಿ ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.