
ಸದ್ಯ ಲಭ್ಯ ಇರುವ ಬಹಳ ಸುಲಭ ಹೂಡಿಕೆ ಯಂತ್ರಗಳಲ್ಲಿ ಮ್ಯೂಚುವಲ್ ಫಂಡ್ (Mutual Fund) ಪ್ರಮುಖವಾದುದು. ಇದು ಬಹಳ ಸುಲಭ ಮತ್ತು ಸರಳ ಹೂಡಿಕೆ ವಿಧಾನ. ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ತಾಂತ್ರಿಕ ತಿಳಿವಳಿಕೆ ಮತ್ತು ಮಾರುಕಟ್ಟೆ ಅರಿವು ಬೇಕಾಗುತ್ತದೆ. ಆದರೆ, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಒಂದಷ್ಟು ಸಾಮಾನ್ಯ ಜ್ಞಾನ ಇದ್ದರೆ ಸಾಕು. ಗ್ರೋ, ಪೇಟಿಎಂ ಮನಿ ಇತ್ಯಾದಿ ಬ್ರೋಕರೇಜ್ ಪ್ಲಾಟ್ಫಾರ್ಮ್ಗಳಲ್ಲಿ, ಅಥವಾ ನೇರ ಮ್ಯೂಚುವಲ್ ಫಂಡ್ ಹೌಸ್ಗಳಲ್ಲಿ ನೀವು ಹೂಡಿಕೆ ಮಾಡಬಹುದು. ಯಾವ ರೀತಿಯ ಮ್ಯೂಚುವಲ್ ಫಂಡ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಒಂದಷ್ಟು ಟಿಪ್ಸ್ ಇಲ್ಲಿದೆ:
ದೀರ್ಘಾವಧಿಯಲ್ಲಿ ಫಂಡ್ ರಿಟರ್ನ್ಸ್ ಎಷ್ಟಿದೆ ನೋಡಿ
ನೀವು ಬ್ರೋಕರೇಜ್ ಆ್ಯಪ್ನಲ್ಲಿ ಮ್ಯೂಚುವಲ್ ಫಂಡ್ಗಳ ಪಟ್ಟಿ ನೋಡುವಾಗ ನಿಮಗೆ 1 ವರ್ಷದ ರಿಟರ್ನ್ಸ್, 3 ವರ್ಷದ ರಿಟರ್ನ್ಸ್ ಹೀಗೆ ನೀಡುವ ಆಯ್ಕೆಗಳಿರುತ್ತವೆ. ಹೆಚ್ಚಿನ ಜನರು 1 ವರ್ಷದ ರಿಟರ್ನ್ ಮಾತ್ರವೇ ಗಮನಿಸುವುದುಂಟು. ಯಾವುದೇ ಫಂಡ್ ಸಾಧನೆಯನ್ನು ಒಂದು ವರ್ಷದ ರಿಟರ್ನ್ಸ್ನಲ್ಲಿ ಅಳೆಯಲು ಆಗುವುದಿಲ್ಲ. ಕನಿಷ್ಠ 5 ವರ್ಷದ ದೀರ್ಘಾವಧಿಯಲ್ಲಿ ಬಂದಿರುವ ರಿಟರ್ನ್ಸ್ ಅನ್ನು ಗಮನಿಸಬೇಕು.
ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು
ರೋಲಿಂಗ್ ರಿಟರ್ನ್ಸ್ ಗಮನಿಸಿ
ಮ್ಯೂಚುವಲ್ ಫಂಡ್ನಲ್ಲಿ ನೀವು ಅದರ ರೋಲಿಂಗ್ ರಿಟರ್ನ್ಸ್ ಸಾಧನೆ ಹೇಗಿದೆ ಎಂದು ಗಮನಿಸುವುದು ಉತ್ತಮ. 2020ರ ಜನವರಿಯಿಂದ 2025ರ ಜನವರಿವರೆಗೆ ಐದು ವರ್ಷದಲ್ಲಿ ಫಂಡ್ನ ರಿಟರ್ನ್ಸ್ ಹೇಗಿದೆ ಎನ್ನುವುದು ಪಾಯಿಂಟ್ ಟು ಪಾಯಿಂಟ್ ರಿಟರ್ನ್ಸ್ ಎನಿಸುತ್ತದೆ. ರೋಲಿಂಗ್ ರಿಟರ್ನ್ಸ್ನಲ್ಲಿ ನೀವು 2020ರ ಜನವರಿಯಿಂದ 2025ರ ಜನವರಿವರೆಗೆ ಎಷ್ಟಿತ್ತು ಎನ್ನುವುದರ ಜೊತೆಗೆ 2019ರ ಡಿಸೆಂಬರ್ನಿಂದ 2024ರ ಡಿಸೆಂಬರ್; 2019ರ ನವೆಂಬರ್ನಿಂದ 2024ರ ನವೆಂಬರ್; ಹೀಗೆ ಐದು ವರ್ಷದ ಪರಿಧಿಯಲ್ಲೇ ವಿವಿಧ ಅವಧಿಗಳಲ್ಲಿ ಫಂಡ್ ಸಾಧನೆ ಹೇಗಿತ್ತು ಎಂದು ತಿಳಿಯುವುದು ಉತ್ತಮ ಎನ್ನುತ್ತಾರೆ ತಜ್ಞರು.
ಮ್ಯೂಚುವಲ್ ಫಂಡ್ನ ಎಕ್ಸ್ಪೆನ್ಸ್ ರೇಶಿಯೋ
ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಬಹಳ ಜನರು ಎಕ್ಸ್ಪೆನ್ಸ್ ರೇಶಿಯೋವನ್ನು ನಿರ್ಲಕ್ಷಿಸಿಬಿಡುತ್ತಾರೆ. ಇದು ತಪ್ಪು. ಅದರಲ್ಲೂ ದೀರ್ಘಾವಧಿ ಹೂಡಿಕೆ ಮಾಡುವಾಗ ಇದು ಮುಖ್ಯ. ಎಕ್ಸ್ಪೆನ್ಸ್ ರೇಶಿಯೋ ಎಂದರೆ ಫಂಡ್ ನಿರ್ವಹಣೆಗೆ ಪಡೆಯಲಾಗುವ ಸೇವಾ ಶುಲ್ಕ. ಇದು ವಾರ್ಷಿಕ ದರ. ಉದಾಹರಣೆಗೆ, ಎಕ್ಸ್ಪೆನ್ಸ್ ರೇಶಿಯೋ ಶೇ. 2 ಇದೆ ಎಂದಿಟ್ಟುಕೊಳ್ಳೋಣ. ನೀವು 1,00,000 ರೂ ಹೂಡಿಕೆ ಮಾಡಿದ್ದೀರಿ. ಇದಕ್ಕೆ 2,000 ರೂ ಎಕ್ಸ್ಪೆನ್ಸ್ ರೇಶಿಯೋ ಆಗುತ್ತದೆ. ವರ್ಷದಲ್ಲಿ ನಿಮ್ಮ ಹೂಡಿಕೆಯು 98,000 ರೂ ಆಗುತ್ತದೆ. ಮ್ಯೂಚುವಲ್ ಫಂಡ್ ಶೇ. 12 ರಿಟರ್ನ್ ಕೊಟ್ಟರೂ ಎಕ್ಸ್ಪೆನ್ಸ್ ರೇಶಿಯೋದಿಂದ ಅದರ ವಾಸ್ತವಿಕ ರಿಟರ್ನ್ ಶೇ. 10 ಆಗಬಹುದು.
ಇದನ್ನೂ ಓದಿ: ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್
ಹೂಡಿಕೆ ವೈವಿಧ್ಯತೆಯ ಮ್ಯೂಚುವಲ್ ಫಂಡ್ಗಳು
ಕೇವಲ ಲಾರ್ಜ್ ಕ್ಯಾಪ್ ಫಂಡ್ ಅನ್ನೋ, ಮಿಡ್ ಕ್ಯಾಪ್ ಅಥವಾ ಸ್ಮಾಲ್ ಕ್ಯಾಪ್ ಫಂಡ್ಗೆ ಮಾತ್ರ ಸೀಮಿತವಾಗುವ ಬದಲು, ಮಲ್ಟಿ ಕ್ಯಾಪ್ ಫಂಡ್, ಮಲ್ಟಿ ಅಸೆಟ್ ಫಂಡ್, ಫ್ಲೆಕ್ಸಿ ಕ್ಯಾಪ್ ಫಂಡ್ ಇತ್ಯಾದಿ ಹೂಡಿಕೆ ವೈವಿಧ್ಯತೆ ಇರುವ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಇಂಡೆಕ್ಸ್ ಫಂಡ್ಗಳು ಸುರಕ್ಷಿತ
ನಿಮಗೆ ಈ ಅಂಶಗಳನ್ನು ಗಮನಿಸುವುದು ಗೋಜಲು ಅಥವಾ ಗೊಂದಲ ಎನಿಸಿದಲ್ಲಿ, ಇಂಡೆಕ್ಸ್ ಫಂಡ್ಗಳನ್ನು ಆಯ್ದುಕೊಳ್ಳುವುದು ಸುರಕ್ಷಿತ ಕ್ರಮ. ನಿಫ್ಟಿ50 ಇಂಡೆಕ್ಸ್ ಫಂಡ್ ಇದಕ್ಕೆ ಒಂದು ಉದಾಹರಣೆ. ಇಂಥ ಇಂಡೆಕ್ಸ್ ಫಂಡ್ಗಳಲ್ಲಿ ಎಕ್ಸ್ಪೆನ್ಸ್ ರೇಶಿಯೋ ಕಡಿಮೆ ಇರುತ್ತದೆ. ಒಟ್ಟಾರೆ ಷೇರು ಮಾರುಕಟ್ಟೆಯ ಗತಿ ಪ್ರಕಾರ ಇದು ರಿಟರ್ನ್ಸ್ ಕೊಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ