“ಹೋಟೆಲ್ ಬಂದ್ ಮಾಡಿದ್ರೆ ನಮ್ಮ ಕುಟುಂಬದ ಗತಿ ಏನು?”: ರಾಜ್ಯದ ಹಲವು ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆ

“ಹೋಟೆಲ್ ಬಂದ್ ಮಾಡಿದ್ರೆ ನಮ್ಮ ಕುಟುಂಬದ ಗತಿ ಏನು?”: ರಾಜ್ಯದ ಹಲವು ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆ

ಬೆಂಗಳೂರು, ಮಾ.11: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎದುರಾಗಿರುವ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯು ಹುಬ್ಬಳ್ಳಿಯ ಹೋಟೆಲ್ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಅಸಾಧ್ಯವಾಗಿದ್ದು, ಹಲವು ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಹೆಚ್ಚು ಗ್ಯಾಸ್ ಬಳಸುವ ಐಟಂಗಳಾದ ಪುರಿ, ದೋಸೆ ಸೇರಿದಂತೆ ಕೆಲವು ಪ್ರಮುಖ ಉಪಹಾರಗಳನ್ನು ತಯಾರಿಸುವುದನ್ನು ಮಾಲೀಕರು ಸ್ಥಗಿತಗೊಳಿಸಿದ್ದಾರೆ. ಗ್ಯಾಸ್ ಉಳಿತಾಯ ಮಾಡಲು ಕೇವಲ ಸೀಮಿತ ತಿಂಡಿಗಳನ್ನು ಮಾತ್ರ ತಯಾರಿಸಲಾಗುತ್ತಿದೆ.ಪಾರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಖರ್ಚು ನಿಭಾಯಿಸಲು ಸಾಧ್ಯವಾಗದೆ ಹೋಟೆಲ್ ಮಾಲೀಕರು ಈಗಾಗಲೇ ತಮ್ಮ ಸಿಬ್ಬಂದಿಗಳನ್ನು ಕಡಿತಗೊಳಿಸುತ್ತಿದ್ದಾರೆ. ಹೋಟೆಲ್ ನಂಬಿ ಜೀವನ ಮಾಡುತ್ತಿರುವ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. “ಹೋಟೆಲ್ ಬಂದ್ ಆದರೆ ನಮ್ಮ ಕುಟುಂಬದ ಗತಿ ಏನು?” ಎಂದು ಕೆಲಸಗಾರರು ಕಣ್ಣೀರು ಹಾಕುತ್ತಿದ್ದಾರೆ. ಕೆಲವು ಸಣ್ಣ ಹೋಟೆಲ್‌ಗಳು ಈಗಾಗಲೇ ಬಾಗಿಲು ಹಾಕಿದ್ದರೆ, ದೊಡ್ಡ ಹೋಟೆಲ್‌ಗಳು ದಾಸ್ತಾನು ಇರುವಷ್ಟು ದಿನ ಮಾತ್ರ ವ್ಯವಹಾರ ನಡೆಸಲು ಮುಂದಾಗಿವೆ. ಇನ್ನು ಬೆಂಗಳೂರಿನ ಅನೇಕ ಕಡೆ ಇದು ಹೋಟೆಲ್​​​ಗಳು ಬಂದ್​​​ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಈ ಸಮಸ್ಯೆಯಿಂದ ಕಂಗೆಟ್ಟಿರುವ ಹೋಟೆಲ್ ಉದ್ಯಮಿಗಳು ಟಿವಿ9 ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದು, ಸರ್ಕಾರದ ವಿಳಂಬ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.”ಸಿಲಿಂಡರ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ, ಸರ್ಕಾರವೇ ಈ ಹೋಟೆಲ್‌ಗಳನ್ನು ವಹಿಸಿಕೊಂಡು ನಡೆಸಲಿ” ಎಂದು ಹೋಟೆಲ್ ಉದ್ಯಮಿ ಶ್ವೇತಾ ಮಡಪ್ಪಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ ಕಂಗೆಟ್ಟಿತ್ತು. ಈಗ ಸಿಲಿಂಡರ್ ಸಿಗದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೋಟೆಲ್ ಉದ್ಯಮವನ್ನು ನಂಬಿ ರಾಜ್ಯದಲ್ಲಿ ಕೋಟ್ಯಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಗ್ಯಾಸ್ ಪೂರೈಕೆ ಸಮರ್ಪಕವಾಗದಿದ್ದರೆ ಮುಂದೆ ದಾರಿ ಕಾಣದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಈ ಗಂಭೀರ ಪರಿಸ್ಥಿತಿಯನ್ನು ಗಮನಿಸಿ, ಸಮರ್ಪಕ ಗ್ಯಾಸ್ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಉದ್ಯಮ ಸಂಪೂರ್ಣವಾಗಿ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಈಕೆಗೆ ಅನುಕಂಪ ತೋರಿಸಿದ್ದೇ ತಪ್ಪಾಯಿತು: ಮದುವೆ ಹಾಲ್​​ನಲ್ಲಿ 120 ಗ್ರಾಂ ಚಿನ್ನಾಭರಣ ಕದ್ದ ಬುರ್ಖಾಧಾರಿ ಕಳ್ಳಿ

ಇನ್ನು ಬೆಳಗಾವಿ ನಗರದಲ್ಲಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಹೋಟೆಲ್ ಮಾಲೀಕರು ಅಕ್ಷರಶಃ ಕಂಗಾಲಾಗಿದ್ದಾರೆ.ಕೇವಲ ಮೂರೇ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 500 ರಿಂದ 600 ರೂಪಾಯಿ ಏರಿಕೆಯಾಗಿದೆ. ಈ ಹಿಂದೆ 1,600 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಬೆಲೆ ಈಗ 2,200 ರೂಪಾಯಿಗೆ ತಲುಪಿದೆ. ಹೆಚ್ಚು ಹಣ ಕೊಡುತ್ತೇವೆ ಎಂದರೂ ಮಾರುಕಟ್ಟೆಯಲ್ಲಿ ಸಿಲಿಂಡರ್‌ಗಳು ಸಿಗುತ್ತಿಲ್ಲ” ಎಂದು ಮಾಲೀಕರು ದೂರಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Leave a Reply

Your email address will not be published. Required fields are marked *