
ಮಂಗಳೂರು, ಮಾ.11: ಈ ಹಿಂದೆ ಕಾಲೇಜು ಚುನಾವಣೆ ಎಂದು ಹೇಳಿಕೊಂಡು ವಿದ್ಯಾರ್ಥಿಗಳ ನಡುವೆ ದೊಡ್ಡ ಜಗಳಗಳು ನಡೆಯುತ್ತಿತ್ತು. ಇದೀಗ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟೇ, ಇನ್ನು ಅದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಅಷ್ಟರಲ್ಲೇ ಮಂಗಳೂರಿನ ಪ್ರತಿಷ್ಠಿತ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಕಿಚ್ಚು ಭುಗಿಲೆದ್ದಿದೆ. ಕಾಂಗ್ರೆಸ್ ಬೆಂಬಲಿತ NSUI ಮತ್ತು ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನಿಂದ ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದೆ.
ಬಜೆಟ್ನಲ್ಲಿ ಚುನಾವಣೆ ಮತ್ತು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಘೋಷಣೆಯನ್ನು ಸ್ವಾಗತಿಸಿ NSUI ಕಾರ್ಯಕರ್ತರು ಕಾಲೇಜು ಕ್ಯಾಂಪಸ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಜಯಘೋಷಗಳನ್ನು ಕೂಗಿದ್ದಾರೆ. ಇದು ಶೈಕ್ಷಣಿಕ ಕೇಂದ್ರದಲ್ಲಿ ರಾಜಕೀಯ ಅಟ್ಟಹಾಸ ಎಂದು ABVP ಆಕ್ರೋಶ ವ್ಯಕ್ತಪಡಿಸಿದೆ.
ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿ ಕಾಲೇಜನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ರಸ್ತೆ ತಡೆ ನಡೆಸಿದರು. ರಾಜಕೀಯ ಘೋಷಣೆ ಕೂಗಲು ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಲಾಯಿತು. ವಿದ್ಯಾರ್ಥಿಗಳ ವಾಗ್ವಾದಕ್ಕೆ ಪ್ರಾಂಶುಪಾಲರು ತತ್ತರಿಸಿ ಹೋದರು.
ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ!
“ಸಿಹಿ ಹಂಚಲು ಮಾತ್ರ ಅನುಮತಿ ನೀಡಿದ್ದೆವು, ಘೋಷಣೆ ಕೂಗಿದ್ದು ಗಮನಕ್ಕೆ ಬಂದಿಲ್ಲ” ಎಂಬ ಪ್ರಾಂಶುಪಾಲರ ಹೇಳಿಕೆ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಘಟನೆ ಸಂಬಂಧ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ (VC) ವರದಿ ನೀಡುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಆರಂಭವಾಗುವ ಮೊದಲೇ ಕ್ಯಾಂಪಸ್ನಲ್ಲಿ ಈ ಮಟ್ಟದ ಕಿತ್ತಾಟ ಶುರುವಾಗಿರುವುದು ಪೋಷಕರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ