
ಬಾಲಿವುಡ್‌ನ ಗ್ಲಾಮರಸ್ ನಟಿ ಮಲೈಕಾ ಅರೋರಾ (Malaika Arora) ಮತ್ತು Splitsvilla X6 ಸ್ಪರ್ಧಿ ಸೋರಬ್ ಬೇಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿತ್ತು. ಇತ್ತೀಚೆಗೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಈ ಚರ್ಚೆ ಶುರುವಾಗಿತ್ತು. ಈಗ ಈ ಎಲ್ಲಾ ವದಂತಿಗಳಿಗೆ ಸೋರಬ್ ಬೇಡಿ (Sorab Bedi) ತೆರೆ ಎಳೆದಿದ್ದಾರೆ. ‘ನಾವಿಬ್ಬರೂ ಕೇವಲ ಸ್ನೇಹಿತರು’ ಎಂದು ಅವರು ಹೇಳಿದ್ದಾರೆ. ಟ್ರೋಲ್ ಮಾಡುವವರ ವಿರುದ್ಧ ಸೋರಬ್ ಬೇಡಿ ಗರಂ ಆಗಿದ್ದಾರೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಸೋರಬ್ ಬೇಡಿ, ‘ನಾವಿಬ್ಬರೂ ಕೇವಲ ಸ್ನೇಹಿತರು ಅಷ್ಟೇ. ಜನರು ಯಾವುದನ್ನಾದರೂ ಕಾಮೆಂಟ್ ಮಾಡುವ ಮೊದಲು ಯೋಚಿಸಬೇಕು. ನಮಗೆ ಕಳೆದ 4 ವರ್ಷಗಳಿಂದ ಪರಿಚಯವಿದೆ. 2022ರಲ್ಲಿ ನನ್ನ ಮಾಡೆಲಿಂಗ್ ದಿನಗಳಲ್ಲಿ ನಾನು ಮೊದಲ ಬಾರಿಗೆ ಮಲೈಕಾರನ್ನು ಭೇಟಿಯಾಗಿದ್ದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಭ್ಯ ಕಾಮೆಂಟ್‌ಗಳ ಬಗ್ಗೆ ಸೋರಬ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಜನರು ತಮಗೆ ಅನಿಸಿದ್ದೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ. ನಾವು ಈ ಹಿಂದೆಯೂ ಹಲವು ಬಾರಿ ಪಾರ್ಟಿ ಮಾಡಿದ್ದೇವೆ. ನಾನು ಅವರ ಜೊತೆಗಿನ ಫೋಟೋ-ವಿಡಿಯೋಗಳನ್ನು ಈ ಮೊದಲೇ ಹಂಚಿಕೊಂಡಿದ್ದೆ. ಆಗ ನಾನು ಯಾರಿಗೂ ಪರಿಚಯವಿರಲಿಲ್ಲ. ಆದರೆ ಇಂದು ಜನರು ನನ್ನನ್ನು ಗುರುತಿಸುತ್ತಿದ್ದಾರೆ ಅಷ್ಟೇ ವ್ಯತ್ಯಾಸ’ ಎಂದಿದ್ದಾರೆ.
‘ನಮ್ಮ ಬಗ್ಗೆ ಮತ್ತು ಮಲೈಕಾ ಬಗ್ಗೆ ಬರುತ್ತಿರುವ ಕೀಳುಮಟ್ಟದ ಕಾಮೆಂಟ್‌ಗಳನ್ನು ಓದಿದಾಗ ನೋವಾಗುತ್ತದೆ. ಅವರೊಬ್ಬ ಮಹಿಳೆ, ಅವರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಲು ಹೇಗೆ ಸಾಧ್ಯ? ನಿಮ್ಮ ಮನೆಯಲ್ಲೂ ಸಹೋದರಿ ಅಥವಾ ಮಗಳು ಇರುತ್ತಾರೆ ಅಲ್ವೇ? ಸತ್ಯ ತಿಳಿಯದೆ ಮಾತನಾಡುವುದು ಸರಿಯಲ್ಲ’ ಎಂದು ಸೋರಬ್ ಬೇಡಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: 52ರ ವಯಸ್ಸಲ್ಲೂ ಮಲೈಕಾ ಅರೋರಾ ಫಿಟ್ ಆಗಿರುವುದು ಹೇಗೆ? ಡಯಟ್ ಏನು?
ಸೋರಬ್ ಬೇಡಿ ಪ್ರಸಿದ್ಧ ಮಾಡೆಲ್ ಮತ್ತು ನಟ. ಇವರು ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಮತ್ತು ‘ಚಾಂದ್ ಜಲ್ನೇ ಲಗಾ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16ರಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಹಿಂದೆ ಅಪೂರ್ವ ರಾಮ್ಪಾಲ್ ಅವರೊಂದಿಗೆ 9 ವರ್ಷಗಳ ಕಾಲ ರಿಲೇಷನ್ಶೀಪ್ನಲ್ಲಿ ಇದ್ದರು. ಬಳಿಕ ಬ್ರೇಕಪ್ ಮಾಡಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.