
2026 ರ ಐಪಿಎಲ್ ಇದೇ ಮಾರ್ಚ್ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಆದಾಗ್ಯೂ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತನ್ನ ನೂತನ ಜೆರ್ಸಿ ಬಿಡುಗಡೆ ಪ್ರೋಮೋದಲ್ಲಿ ಆರ್‌ಸಿಬಿ ತಂಡವನ್ನು ಬಹಿರಂಗವಾಗಿಯೇ ಗೇಲಿ ಮಾಡಿದ್ದು, ಇದು ಹಾಲಿ ಚಾಂಪಿಯನ್ ತಂಡದ ಅಭಿಮಾನಿಗಳನ್ನು ಕೆರಳಿಸಿದೆ. ಕಳೆದ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಇದೇ ಆರ್‌ಸಿಬಿ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಮತ್ತು ಇಡೀ ಆವೃತ್ತಿಯಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದ್ದ ಕೆಕೆಆರ್, ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿ ಲೀಗ್ನ ಕಾವು ಹೆಚ್ಚಾಗುವಂತೆ ಮಾಡಿದೆ.
ವಾಸ್ತವವಾಗಿ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕೆಕೆಆರ್ ಫ್ರಾಂಚೈಸಿ ತನ್ನ ತಂಡದ ನೂತನ ಜೆರ್ಸಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. 1:38 ನಿಮಿಷಗಳ ವಿಡಿಯೋದಲ್ಲಿ ಕೆಕೆಆರ್ ತನ್ನ ಕೆಲವು ಐತಿಹಾಸಿಕ ಸಾಧನೆಗಳನ್ನು ನೆನಪು ಮಾಡಲು ಪ್ರಯತ್ನಿಸಲಿದೆ. ಇದರಲ್ಲಿ ಹೆಚ್ಚಿನದಾಗಿ ಆರ್‌ಸಿಬಿ ವಿರುದ್ಧ ಕೆಕೆಆರ್ ತಂಡದ ಪಾರುಪತ್ಯ ಹೇಗಿತ್ತು ಎಂಬುದನ್ನು ಹೇಳಿದೆ. ಅದರಲ್ಲೂ ಕೆಕೆಆರ್, ಪ್ರಸ್ತುತ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಉದ್ದೇಶಪೂರ್ವಕವಾಗಿ ಅಣಕಿಸುವ ಕೆಲಸ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲವನ್ನು ಉಂಟುಮಾಡಿದೆ.
ಮಾರ್ಚ್ 14 ರ ಶನಿವಾರ, ಕೆಕೆಆರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸ ಜೆರ್ಸಿಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಮೊದಲಿಗೆ ಟ್ರಾಫಿಕ್ ಸಿಗ್ನಲ್ ತೋರಿಸಲಾಗಿದ್ದು, ಆ ಸಿಗ್ನಲ್ನ ಒಂದು ದೀಪದಲ್ಲಿ 49 ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಇದು 49 ಸೆಕೆಂಡುಗಳನ್ನು ಅರ್ಥೈಸುತ್ತದೆಯಾದರೂ, ಇಲ್ಲಿ ತನ್ನ ಬುದ್ಧಿ ಬಳಸಿರುವ ಕೆಕೆಆರ್, ಹಾಲಿ ಚಾಂಪಿಯನ್ ಬೆಂಗಳೂರು ತಂಡವನ್ನು 49 ರನ್ಗಳಿಗೆ ಆಲೌಟ್ ಮಾಡಿದ್ದನ್ನು ನೆನಪಿಸುವ ಕೆಲಸ ಮಾಡಿದೆ.
ವಾಸ್ತವವಾಗಿ, 2017 ರ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 131 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಕೇವಲ 49 ರನ್ಗಳಿಗೆ ಆಲೌಟ್ ಆಗಿ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಮೊದಲ ತಂಡವೆಂಬ ಮುಜುಗರದ ದಾಖಲೆಗೆ ಕೊರಳೊಡ್ಡಿತ್ತು.
ಇದಾದ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ 158ನೇ ಟೇಕ್ ಎಂಬುದನ್ನು ಬಳಸಿರುವ ಕೆಕೆಆರ್ ಮತ್ತೆ ಆರ್ಸಿಬಿಯನ್ನು ಅಣಕಿಸುವ ಕೆಲಸ ಮಾಡಿದೆ. ಐಪಿಎಲ್ ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ್ದ ಬ್ರೆಂಡನ್ ಮೆಕಲಮ್ ಬರೋಬ್ಬರಿ 158 ರನ್ಗಳ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲೂ ಆರ್‌ಸಿಬಿ ಹೀನಾಯವಾಗಿ ಸೋತಿತ್ತು. ವಿಡಿಯೋ ಮುಂದುವರೆದಂತೆ ಸ್ಕೂಟರ್ನ ನಂಬರ್ ಪ್ಲೇಟ್ ತೋರಿಸಲಾಗಿದೆ. ಅದರಲ್ಲಿ 272-7 ಎಂದು ಬರೆಯಲಾಗಿದೆ. ಇದು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದೆ.
ಅದೇ ರೀತಿ, ಒಂದು ಸ್ಥಳದಲ್ಲಿ, 105/0, 6 ಓವರ್‌ಗಳು ಮತ್ತು 5 ಸಿಕ್ಸರ್ಗಳು ಎಂದು ಬರೆಯಲಾಗಿದೆ. ಇದು 2017 ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದ ಪವರ್‌ಪ್ಲೇನಲ್ಲಿ ಕೆಕೆಆರ್ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಇನ್ನು 6 ಎಸೆತಗಳಲ್ಲಿ 5 ಸಿಕ್ಸರ್ ಎಂಬುದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್ನಲ್ಲಿ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಂದಹಾಗೆ ಆ ಓವರ್ ಬೌಲ್ ಮಾಡಿದ್ದು, ಪ್ರಸ್ತುತ ಆರ್‌ಸಿಬಿ ಪರ ಆಡುತ್ತಿರುವ ವೇಗಿ ಯಶ್ ದಯಾಳ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ