
ಬೆಂಗಳೂರು, ಮಾರ್ಚ್ 16: ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕರ್ನಾಟಕದ ಹಲವೆಡೆ ಭಾನುವಾರ ಮಳೆಯಾಗಿದ್ದು, ಜನತೆಗೆ ಕೊಂಚ ನೆಮ್ಮದಿ ತಂದಿದೆ. ಚಿಕ್ಕಮಗಳೂರು, ಬೀದರ್, ಬೆಳಗಾವಿ, ಮಡಿಕೇರಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ ಮಳೆಯೊಂದಿಗೆ ಬೀಸಿದ ಗಾಳಿಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಶೃಂಗೇರಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಮೂಡಿಗೆರೆ ಮತ್ತು ಎನ್.ಆರ್.ಪುರ ತಾಲೂಕುಗಳ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಬೆಳಗಾವಿ ನಗರದ ಸದಾಶಿವನಗರ ಮತ್ತು ಶಾಹುನಗರದಲ್ಲಿ ಭಾರೀ ಮಳೆಯಾಗಿದೆ. ಬೀದರ್‌ನ ಔರಾದ್, ಕಮಲನಗರ, ಭಾಲ್ಕಿ, ಚಿಟಗುಪ್ಪ, ಬಸವಕಲ್ಯಾಣ, ಹುಲಸೂರು ಸೇರಿದಂತೆ ಹಲವೆಡೆ ಉತ್ತಮ ಮಳೆ ಸುರಿದಿದೆ.