
ನವದೆಹಲಿ, ಮಾರ್ಚ್ 16: ಅಮೆರಿಕದಿಂದ ಹೊಸ ಟ್ಯಾರಿಫ್ ಫ್ರೇಮ್ವರ್ಕ್ (Tariffs framework) ಸ್ಪಷ್ಟವಾದ ಬಳಿಕವಷ್ಟೇ ಭಾರತದಿಂದ ಟ್ರೇಡ್ ಡೀಲ್ಗೆ ಸಹಿ ಹಾಕಲಾಗುತ್ತದೆ ಎಂದು ಸರ್ಕಾರದಿಂದ ಸ್ಪಷ್ಟನೆ ಬಂದಿದೆ. ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆಗಳು ಇನ್ನೂ ಚಾಲನೆಯಲ್ಲಿರುವ ಸಂಗತಿಯನ್ನು ತಿಳಿಸಿದ್ದಾರೆ.
ಅಮೆರಿಕದೊಂದಿಗೆ ಒಪ್ಪಂದದ ವಿವರಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹೊಸ ಟ್ಯಾರಿಫ್ ಚೌಕಟ್ಟು ಜಾರಿಗೆ ಬಂದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದು ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ವಾಣಿಜ್ಯ ಕಾರ್ಯದರ್ಶಿಗಳು ಟ್ರೇಡ್ ಡೀಲ್ ಸಂಬಂಧ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 1ರಿಂದ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ
ಕಳೆದ ತಿಂಗಳು (ಫೆಬ್ರುವರಿ) ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದದ ಫ್ರೇಮ್ವರ್ಕ್ ಸಿದ್ಧವಾಗಿತ್ತು. ಈ ತಿಂಗಳೇ (ಮಾರ್ಚ್) ಅದಕ್ಕೆ ಸಹಿ ಹಾಕುವ ನಿರೀಕ್ಷೆ ಇತ್ತು. ಆದರೆ, ಆ ಮಧ್ಯೆ ಅಮೆರಿಕದ ಸುಪ್ರೀಂಕೋರ್ಟ್ ಟ್ಯಾರಿಫ್ ಕ್ರಮವನ್ನು ರದ್ದುಗೊಳಿಸಿ ತೀರ್ಪು ಕೊಟ್ಟಿದ್ದು ಇತ್ಯಾದಿ ವಿದ್ಯಮಾನಗಳಿಂದ ವ್ಯಾಪಾರ ನೀತಿಯಲ್ಲಿ ಏರುಪೇರಾಗಿದೆ. ಹೀಗಾಗಿ, ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಡದೆ ಸ್ಥಗಿತಗೊಂಡಿದೆ.
ವ್ಯಾಪಾರ ಒಪ್ಪಂದದ ಕಾನೂನು ಅಂಶ ಅಥವಾ ನಿಯಮವನ್ನು ಅಂತಿಮಗೊಳಿಸಲು ಭಾರತ ಮತ್ತು ಅಮೆರಿಕದ ಮುಖ್ಯ ಸಂಧಾನಕಾರರ ನಡುವೆ ಮಾತುಕತೆಗೆ ನಿಗದಿಯಾಗಿದ್ದ ಭೇಟಿಯನ್ನು ಮುಂದೂಡಲಾಗಿದೆ. ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ಸಂದರ್ಭದಲ್ಲಿ ಅಮೆರಿಕವು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಿಲಾಗಿತ್ತು. ಚೀನಾ, ವಿಯೆಟ್ನಾಂ, ಥಾಯ್ಲೆಂಡ್, ಬಾಂಗ್ಲಾದೇಶ ಮೊದಲಾದ ಭಾರತದ ಪ್ರತಿಸ್ಪರ್ಧಿಗಳಿಗಿಂತ ಈ ಟ್ಯಾರಿಫ್ ದರ ತುಸು ಕಡಿಮೆ.
ಇದನ್ನೂ ಓದಿ: ಪ್ಲೇಸ್ಟೋರ್ನಲ್ಲಿ ಚ್ಯಾಟ್ಜಿಪಿಟಿ, ಫ್ಲಿಪ್ಕಾರ್ಟ್ ಅನ್ನು ಮೀರಿಸಿದ ಎಲ್ಪಿಜಿ ಬುಕಿಂಗ್ ಆ್ಯಪ್
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಮೆರಿಕವೇನಾದರೂ ತನ್ನ ಟ್ಯಾರಿಫ್ ನೀತಿಯಲ್ಲಿ ಬದಲಾವಣೆ ಮಾಡಿ ಎಲ್ಲಾ ದೇಶಗಳ ಮೇಲಿನ ಟ್ಯಾರಿಫ್ ಅನ್ನು ಕಡಿಮೆಗೊಳಿಸಿದಲ್ಲಿ ಭಾರತಕ್ಕೆ ಹಾಕಿರುವ ಶೇ. 18 ಟ್ಯಾರಿಫ್ ದರವೂ ಕಡಿಮೆಗೊಳ್ಳಬಹುದು. ಜಪಾನ್, ಸೌತ್ ಕೊರಿಯಾ, ಬ್ರಿಟನ್, ಕೆನಡಾ ಇತ್ಯಾದಿ ಕೆಲವೇ ದೇಶಗಳಿಗೆ ಮಾತ್ರ ಅಮೆರಿಕ ಶೇ. 10ರ ಆಸುಪಾಸಿನಲ್ಲಿ ಟ್ಯಾರಿಫ ಹಾಕಿದೆ. ಉಳಿದ ದೇಶಗಳಿಗೆ ಶೇ. 18ಕ್ಕಿಂತಲೂ ಹೆಚ್ಚಿನ ಟ್ಯಾರಿಫ್ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ