
ಬೆಂಗಳೂರು, ಮಾ.17: “ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ” ಎಂಬ ಮಾತನ್ನು ಕೇವಲ ಮಾತಾಗಿ ಉಳಿಸದೆ, ಪ್ರಾಯೋಗಿಕವಾಗಿ ಅಮೂಲ್ಯ ಜೀವವೊಂದನ್ನು ಉಳಿಸುವ ಮೂಲಕ ಯಲಹಂಕ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಮೂರ್ತಿ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಶಾನ್ಯ ವಿಭಾಗದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಮೇಲೆ ವ್ಯಕ್ತಿಯೊಬ್ಬರು ಮಲಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ತುರ್ತು ಕರೆ ಪೊಲೀಸ್ ನಿಯಂತ್ರಣ ಕೊಠಡಿಗೆ (Namma 112) ಬಂದಿತ್ತು. ಈ ಮಾಹಿತಿಯನ್ನು ಸ್ವೀಕರಿಸಿದ ಕೂಡಲೇ ಗಸ್ತು ವಾಹನದಲ್ಲಿದ್ದ ಶ್ರೀ ಶ್ರೀಧರ್ ಮೂರ್ತಿ (HC-13669) ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ರೈಲು ಬರುವ ಮುನ್ನವೇ ಹಳಿಯ ಬಳಿಗೆ ತಲುಪಿದ ಶ್ರೀಧರ್ ಮೂರ್ತಿ ವ್ಯಕ್ತಿಯನ್ನು ಸುರಕ್ಷಿತವಾಗಿ ಅಲ್ಲಿಂದ ಪಾರು ಮಾಡಿದರು. ಕೇವಲ ರಕ್ಷಣೆ ಮಾಡುವುದಕ್ಕೆ ಸೀಮಿತವಾಗದ ಅವರು, ಆ ವ್ಯಕ್ತಿಯೊಂದಿಗೆ ಸಮಾಲೋಚನೆ ನಡೆಸಿದರು. ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ಆತ್ಮಹತ್ಯೆ ಅಂತಿಮ ನಿರ್ಧಾರವಲ್ಲ ಎಂದು ಮನವರಿಕೆ ಮಾಡಿಕೊಟ್ಟು, ಆತನಲ್ಲಿ ಧೈರ್ಯ ತುಂಬಿದರು.ಬಳಿಕ ವ್ಯಕ್ತಿಯ ಕುಟುಂಬದವರನ್ನು ಸಂಪರ್ಕಿಸಿ, ನಡೆದ ಘಟನೆಯ ಬಗ್ಗೆ ವಿವರಿಸಿ ಸುರಕ್ಷಿತವಾಗಿ ಕುಟುಂಬಸ್ಥರ ಒಪ್ಪಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ