
ಬೆಂಗಳೂರು, ಮಾ.19: ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ ಚಾಲಕರ ಹಗರಣಗಳು ಹೊಸ ರೂಪವನ್ನು ಪಡೆದುಕೊಂಡಿದೆ. ಓಲಾ ಆಪ್ನಲ್ಲಿ ಬುಕ್ ಮಾಡಿದ್ದ ಕನಿಷ್ಠ ದರದ ಪ್ರಯಾಣವೊಂದನ್ನು ತಾಂತ್ರಿಕವಾಗಿ ತಿರುಚಿ, ಸಾವಿರಾರು ರೂಪಾಯಿ ಹಣ ವಸೂಲಿ ಮಾಡಲು ಯತ್ನಿಸಿದ ಚಾಲಕನ ವಂಚನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಯಾಣಿಕರೊಬ್ಬರು ತಮ್ಮ ರೈಡ್ ಆರಂಭಿಸಿದಾಗ ತೋರಿಸಿದ ದರ ಕೇವಲ 285 ರೂಪಾಯಿ. ಆದರೆ, ಗಮ್ಯಸ್ಥಾನ ತಲುಪಿದಾಗ ಓಲಾ ಆಪ್ನಲ್ಲಿ ತೋರಿಸಿದ ಬಿಲ್ ಬರೋಬ್ಬರಿ 5,950 ರೂಪಾಯಿ!
ಚಾಲಕನು ಯಾವುದೋ ತಾಂತ್ರಿಕ ಹ್ಯಾಕಿಂಗ್ ತಂತ್ರ ಬಳಸಿ ಪ್ರಯಾಣ ದರವನ್ನು ಬೇಕಂತಲೇ ಹೆಚ್ಚಿಸಿರುವ ಶಂಕೆ ವ್ಯಕ್ತವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ನೋಡಿ ಪ್ರಯಾಣಿಕರು ಶಾಕ್ ಆಗಿದ್ದಾರೆ. ಬಿಲ್ ಪಾವತಿಸಲು ನಿರಾಕರಿಸಿದ ಪ್ರಯಾಣಿಕರು, “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡುತ್ತೇವೆ ಎಂದ ತಕ್ಷಣ ಗಾಬರಿಗೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ವೈರಲ್ ಆಗಿರುವ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಇಂತಹ ಘಟನೆಗಳ ಬಗ್ಗೆ ತಕ್ಷಣ ವರದಿ ಮಾಡಲು ಸಲಹೆ ನೀಡಿದ್ದಾರೆ. “ದಯವಿಟ್ಟು ಈ ಘಟನೆಯನ್ನು ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ, ತಕ್ಷಣ ಕ್ರಮ ಕೈಗೊಳ್ಳಿ. ನೀವು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದರೆ, ದಯವಿಟ್ಟು ನಮ್ಮ 112 ಗೆ ಕರೆ ಮಾಡಿ ವರದಿ ಮಾಡಿ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹೊಯ್ಸಳ ಗಸ್ತು ವಾಹನವನ್ನು ಸ್ಥಳಕ್ಕೆ ಕಳುಹಿಸಲಾಗುತ್ತದೆ.” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ! ಮಲ್ಲೇಶ್ವರಂನಲ್ಲಿ ಕಿಲೋಮೀಟರ್ ಉದ್ದದ ಕ್ಯೂ
ರೈಡ್-ಹೇಲಿಂಗ್ ಕಂಪನಿಗಳು ಸಾಮಾನ್ಯವಾಗಿ ಜಿಪಿಎಸ್ ಆಧಾರಿತ ದರ ಲೆಕ್ಕಾಚಾರ ಮತ್ತು ಕ್ರಿಯಾತ್ಮಕ ಬೆಲೆ ನಿಗದಿಯನ್ನು ಬಳಸುತ್ತವೆ, ಆದರೆ ಈ ಪ್ರಮಾಣದ ವ್ಯತ್ಯಾಸಗಳು ಕಂಡು ಬಂದರೆ ಇದು ಮೋಸ ಎಂದು ಗೊತ್ತಾಗುತ್ತದೆ. ಇನ್ನು ಕಂಪನಿಯು ಹೇಳಿರುವ ಪ್ರಕಾರ ಪ್ರಯಾಣಿಕರಿಗೆ ಅಪ್ಲಿಕೇಶನ್ನಲ್ಲಿನ ಪಾವತಿಗಳನ್ನು ಮಾತ್ರ ಅವಲಂಬಿಸಲು, ನಗದು ವಿವಾದಗಳನ್ನು ತಪ್ಪಿಸಲು ಮತ್ತು ಅಧಿಕೃತ ಮಾರ್ಗಗಳ ಮೂಲಕ ಸಮಸ್ಯೆಗಳನ್ನು ತಕ್ಷಣ ವರದಿ ಮಾಡಲು ಸಲಹೆ ನೀಡಿದೆ.