
ನವದೆಹಲಿ, ಮಾರ್ಚ್ 19: ಭಾರತದ ಷೇರು ಮಾರುಕಟ್ಟೆ (Stock Market) ಯುಗಾದಿ ಹಬ್ಬದ ದಿನದಂದು ಅಕ್ಷರಶಃ ಗಡಗಡ ಅಲುಗಾಡಿದೆ. ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಹೆಚ್ಚೂಕಡಿಮೆ ಶೇ. 3ರಷ್ಟು ಕುಸಿತವನ್ನು ಕಂಡಿವೆ. ಮೂರು ದಿನ ಪಾಸಿಟಿವ್ ಆಗಿದ್ದ ಈ ಇಂಡೆಕ್ಸ್ ಗುರುವಾರ ನೆಲಕಚ್ಚಿವೆ. ಸೆನ್ಸೆಕ್ಸ್ 2,496 ಅಂಕಗಳನ್ನು ಕಳೆದುಕೊಂಡು 74,207.24 ಮಟ್ಟಕ್ಕೆ ಮುಟ್ಟಿದೆ. ನಿಫ್ಟಿ50 ಇಂಡೆಕ್ಸ್ 775.65 ಅಂಕಗಳ ಕಳೆದುಕೊಂಡು 23,002.15 ಮಟ್ಟ ಮುಟ್ಟಿದೆ.
ಈ ಇಂಡೆಕ್ಸ್ನಲ್ಲಿರುವ ಹತ್ತಾರು ಕಂಪನಿಗಳಷ್ಟೇ ಹಿನ್ನಡೆ ಹೊಂದಿಲ್ಲ, ಬಹುತೇಕ ಇಡೀ ಷೇರು ಮಾರುಕಟ್ಟೆಯ ಹೆಚ್ಚಿನ ಕಂಪನಿಗಳ ಷೇರುಗಳಿಗೆ ಹಿನ್ನಡೆಯಾಗಿದೆ. ಎನ್ಎಸ್ಇನಲ್ಲಿ ಲಿಸ್ಟ್ ಆಗಿರುವ ಸುಮಾರು 4,000 ಷೇರುಗಳ ಪೈಕಿ 3,048 ಷೇರುಗಳು ನೆಗಟಿವ್ ಆಗಿವೆ. 864 ಷೇರುಗಳು ಮಾತ್ರವೇ ಗುರುವಾರ ಲಾಭ ಕಂಡಿರುವುದು.
ಎಚ್ಡಿಎಫ್ಸಿ ಬ್ಯಾಂಕ್, ಎಟರ್ನಲ್, ಶ್ರೀರಾಮ್ ಫೈನಾನ್ಸ್ ಷೇರುಗಳು ಅತಿಹೆಚ್ಚು ಕಳೆದುಕೊಂಡಿರುವುದು. ಗುರುವಾರ ಗಳಿಕೆ ಕಂಡಿರುವ ಷೇರುಗಳಲ್ಲಿ ಹೆಚ್ಚಿನವು ತೈಲ ಮತ್ತು ಇಂಧನ ಕ್ಷೇತ್ರದ ಕಂಪನಿಗಳಾಗಿವೆ.
ಷೇರು ಮಾರುಕಟ್ಟೆ ಕುಸಿತಕ್ಕೆ ಕೆಲ ಸಂಭಾವ್ಯ ಕಾರಣಗಳು ಇಂತಿವೆ:
- ಅಮೆರಿಕ ಇರಾನ್ ಸಂಘರ್ಷ ತಣ್ಣಗಾರುವ ಲಕ್ಷಣ ಕಾಣುತ್ತಿಲ್ಲ. ತನ್ನನ್ನು ಹೊಡೆದರೆ ತಾನು ಯಾರನ್ನೂ ಬಿಡುವುದಿಲ್ಲ ಎಂದು ಇರಾನ್ ಮಾಡು ಇಲ್ಲ ಮಡಿ ಹೋರಾಟಕ್ಕೆ ಸಿದ್ಧಗೊಂಡಿದೆ. ಇದು ಎಲ್ಲೆಡೆ ಭಯ ಮೂಡಲು ಕಾರಣವಾಗಿದೆ.
- ಇರಾನ್ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 110 ಡಾಲರ್ ದಾಟಿದೆ. ಇದು ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಮತ್ತು ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಹೀಗಾಗಿ, ಮಾರುಕಟ್ಟೆ ಭಯಗ್ರಸ್ತವಾಗಿದೆ.
- ಎಚ್ಡಿಎಫ್ಸಿ ಬ್ಯಾಂಕ್ನ ಛೇರ್ಮನ್ ಅತಾನು ಚಕ್ರಬರ್ತಿ ಅವರು ನೈತಿಕ ಕಾರಣವೊಡ್ಡಿ ರಾಜೀನಾಮೆ ನೀಡಿರುವುದು ಅದರ ಷೇರು ಕುಸಿತಕ್ಕೆ ಎಡೆ ಮಾಡಿಕೊಟ್ಟಿದೆ. ಎಚ್ಡಿಎಫ್ಸಿ ಬ್ಯಾಂಕ್ನ ಷೇರುಬೆಲೆ ಒಂದೇ ದಿನದಲ್ಲಿ ಶೇ. 8ರಷ್ಟು ಕುಸಿತವಾಗಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್ಪಿಜಿ ಟ್ಯಾಂಕರ್ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?
ಹಾಗೆಯೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆಯು ಹಣದುಬ್ಬರ ಏರಬಹುದು ಎಂದು ಹೇಳಿದ್ದು, ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತ ಮುಂದುರಿಯುತ್ತಿರುವುದು, ಎಫ್ಐಐಗಳಿಂದ ಷೇರುಗಳ ಬಿಕರಿಯಾಗುತ್ತಿರುವುದು ಇವೆಲ್ಲವೂ ಭಾರತದ ಷೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣಗಳಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ