
ಬೆಂಗಳೂರು, ಮಾರ್ಚ್ 19: ಸಮವಸ್ತ್ರದಲ್ಲಿಯೇ ಕಚೇರಿಯಲ್ಲಿ ಮಹಿಳೆಯೋರ್ವರ ಜೊತೆ ಅನುಚಿತವಾಗಿ ಕೆ. ರಾಮಚಂದ್ರ ರಾವ್ ವರ್ತಿಸಿರುವ ವಿಡಿಯೋ ವೈರಲ್ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ವಿಡಿಯೋಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಡೀಪ್ಫೇಕ್, AI ನಿರ್ಮಿತ ಅಥವಾ ಯಾವುದೇ ರೀತಿಯಲ್ಲಿ ಎಟಿಟ್ ಆಗಿರುವ ದೃಶ್ಯಗಳಲ್ಲ ಎಂಬುದು ದೃಢ ಪಟ್ಟಿದೆ. ಈ ಕುರಿತು ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ 4 ಮಂದಿ ಐಪಿಎಸ್ ಅಧಿಕಾರಿಗಳ ತಂಡ 100 ಪುಟಗಳ ವರದಿ ನೀಡಿದೆ.
ವರದಿಯಲ್ಲಿ ಏನಿದೆ?
- ವಿಡಿಯೋಗಳು ನಿಜವಾಗಿವೆ, ಎಡಿಟ್ ಆಗಿಲ್ಲ
- ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL) ದೃಢೀಕರಣದಂತೆ ವಿಡಿಯೋಗಳಲ್ಲಿ ಯಾವುದೇ ಮಾರ್ಪಾಡಾಗಿಲ್ಲ
- ರಾವ್ ಅವರ ಬೆಳಗಾವಿ ಅವಧಿಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ (ಚಾಲಕರು, ಕಚೇರಿ ಸಿಬ್ಬಂದಿ) ಮಹಿಳೆಯರನ್ನು ಗುರುತಿಸಿದ್ದು, ಅವರು ರಾವ್ ಅವರ ಖಾಸಗಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದನ್ನು ದೃಢಪಡಿಸಿದ್ದಾರೆ
- ಮೂಲಗಳ ಪ್ರಕಾರ, ಮಹಿಳೆಯರಲ್ಲಿ ಒಬ್ಬರು ತಮ್ಮ ಮೊಬೈಲ್ನಲ್ಲಿ ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ್ದಾರೆ
ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆಯರ ಜತೆ ಡಿಜಿಪಿ ಸರಸ ಸಲ್ಲಾಪ: ರಾಮಚಂದ್ರ ರಾವ್ಗೆ ಸಂಕಷ್ಟ!
ಮಹಿಳೆಯರು ನಾಪತ್ತೆ, ಮುಂದೇನು?
ಪ್ರಕರಣದಲ್ಲಿ ಬಹು ಮುಖ್ಯವಾದ ವಿಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ಘಟನೆ ಬೆಳಕಿಗೆ ಬಂದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಆದರೆ ಮುಂದಿನ ನತಿಖೆಗೆ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಅವರು ತನಿಖಾ ತಂಡದ ಮುಂದೆ ಹಾಜರಾಗಲೇಬೇಕಿದೆ. ಮತ್ತೊಂದೆಡೆ ಹಿರಿಯ ಅಧಿಕಾರಿಗಳ ತಂಡದ ವರದಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಧಿಕೃತ ಇಲಾಖಾ ತನಿಖೆ ಪ್ರಾರಂಭವಾಗಿದೆ. ರಾವ್ ಮೇ 31ರಂದು ನಿವೃತ್ತಿಯಾಗಲಿದ್ದಾರೆಯಾದರೂ ತನಿಖೆ ಮುಂದುವರಿದರೆ, ಅವರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ನೌ ವರದಿ ಮಾಡಿದೆ.
ಇಬ್ಬರು ಮಹಿಳೆಯರೊಂದಿಗೆ ಕೆ. ರಾಮಚಂದ್ರ ರಾವ್ ಅಸಭ್ಯ ವರ್ತನೆ ನಡೆಸುತ್ತಿರುವ ದೃಶ್ಯಗಳು 2016-17ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ವಿಡಿಯೋಗಳು ಹೊರಬಂದಾಗ, ರಾವ್ ಅವುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಅವು ಮಾರ್ಫ್ ಮಾಡಲ್ಪಟ್ಟಿದ್ದು, AI ಮೂಲಕ ಸೃಷ್ಟಿಸಲ್ಪಟ್ಟಿವೆ. ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಕೂಡ ಎಚ್ಚರಿಕೆ ನೀಡಿದ್ದರು. ಆದರೆ ಈಗ ಆ ವಿಡಿಯೋಗಳ ಅಸಲೀಯತ್ತು ಹೊರ ಬಂದಿರೋದು ಅಮಾನತುಗೊಂಡಿರುವ ಡಿಜಿಪಿಗೆ ಸಂಕಷ್ಟ ತಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.