
ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ (Team India) ಇದೀಗ ಐಪಿಎಲ್ನಲ್ಲಿ (IPL 2026) ಕಣಕ್ಕಿಳಿಯಲು ಸಜ್ಜಾಗಿದೆ. ಎರಡು ತಿಂಗಳ ಕಾಲ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬೆವರು ಹರಿಸಲಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ಮತ್ತೆ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ಭಾರತದ ಮುಂದಿನ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಈ ಸರಣಿ ಜೂನ್ ಕೊನೆಯ ವಾರದಲ್ಲಿ ನಡೆಯಲಿದ್ದು, ಸರಣಿಯ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮೊದಲು ಟೀಂ ಇಂಡಿಯಾ ಈ ಸರಣಿಯನ್ನು ಆಡಲಿದೆ. ವಾಸ್ತತವಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಜುಲೈ ತಿಂಗಳಲ್ಲಿ ಐದು ಪಂದ್ಯಗಳ ಟಿ20 ಸರಣಿ ಹಾಗೂ ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆ ಸರಣಿ ಆರಂಭಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಈ ಟಿ20 ಸರಣಿಯನ್ನು ಆಡಲಿದೆ.
ಭಾರತದ ಇಂಗ್ಲೆಂಡ್ ಪ್ರವಾಸ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಜುಲೈ 1 ರಂದು ಆರಂಭವಾಗಲಿದ್ದು, ಅದಕ್ಕೂ ಮುನ್ನ ಅಂದರೆ ಜೂನ್ನಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಈ ಸರಣಿಯ ದಿನಾಂಕಗಳನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಈ ಸರಣಿಯ ನಂತರ, ಟೀಂ ಇಂಡಿಯಾ ಜುಲೈ 1, 4, 7, 9 ಮತ್ತು 11 ರಂದು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಇದರ ನಂತರ ಜುಲೈ 14 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಎರಡನೇ ಏಕದಿನ ಪಂದ್ಯ ಜುಲೈ 16 ರಂದು ಮತ್ತು ಮೂರನೇ ಪಂದ್ಯ ಜುಲೈ 19 ರಂದು ನಡೆಯಲಿದೆ.
ತಪ್ಪು ನನ್ನದೇ.. ಟಿ20 ವಿಶ್ವಕಪ್ ಗೆದ್ದು ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿದ ಸೂರ್ಯ
ಭಾರತ-ಐರ್ಲೆಂಡ್ ಟಿ20 ಸರಣಿ
ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್ಗೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿಯಾಗಲಿದೆ. ಟೀಂ ಇಂಡಿಯಾ ಇದುವರೆಗೆ ಐರ್ಲೆಂಡ್ನಲ್ಲಿ ಆರು ಟಿ20 ಪಂದ್ಯಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ ಈ ಎಲ್ಲಾ ಪಂದ್ಯಗಳು ಡಬ್ಲಿನ್ನ ಮಲಾಹೈಡ್ನಲ್ಲಿ ನಡೆದಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ