2026 ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆರಂಭಿಕ ಆಟಗಾರ ಇಂಗ್ಲೆಂಡ್ನ ಬೆನ್ ಡಕೆಟ್ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂಪಡೆದುಕೊಂಡಿದ್ದಾರೆ. ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡಕೆಟ್ ಅವರ ಈ ನಿರ್ಧಾರ ಡೆಲ್ಲಿ ಕ್ಯಾಪಿಟಲ್ಸ್ ಸಿದ್ಧತೆಗಳಿಗೆ ಅಡ್ಡಿಯಾಗಿದೆ.
ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವ ಘೋಷಣೆ ಮಾಡಿರುವ ಡಕೆಟ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಎಡಗೈ ಬ್ಯಾಟ್ಸ್ಮನ್ ಬೆನ್ ಡಕೆಟ್ ಅವರನ್ನು ದೆಹಲಿ ಕ್ಯಾಪಿಟಲ್ಸ್ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿತು. ಇದು ಡಕೆಟ್ ಅವರ ಐಪಿಎಲ್ನ ಚೊಚ್ಚಲ ಆವೃತ್ತಿಯಾಗುವುದರ ಜೊತೆಗೆ ಅವರಿಗೆ ಆಡುವ ಅವಕಾಶವೂ ಸಿಗುವುದರಲ್ಲಿತ್ತು.
ಇನ್ನು ಐಪಿಎಲ್ನಿಂದ ಹಿಂದೆ ಸರಿಯುವುದಕ್ಕೆ ಕಾರಣವನ್ನು ನೀಡಿರುವ ಬೆನ್ ಡಕೆಟ್, ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದತ್ತ ಗಮನ ಹರಿಸುವ ನಿರ್ಧಾರವನ್ನು ಉಲ್ಲೇಖಿಸಿ, ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಐಪಿಎಲ್ 2026 ರಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಡಕೆಟ್ ತಮ್ಮ ನಿರ್ಧಾರಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಳಿ ಕ್ಷಮೆಯಾಚಿಸಿ, ಮುಂಬರುವ ವರ್ಷಗಳಲ್ಲಿ ಮತ್ತೆ ಡೆಲ್ಲಿ ಪರ ಆಡುವುದಾಗಿ ತಿಳಿಸಿದ್ದಾರೆ.
ಆದರೆ ಇದೀಗ, ಡಕೆಟ್ ಅವರ ಈ ನಿರ್ಧಾರದಿಂದಾಗಿ, ಬಿಸಿಸಿಐ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತವಾಗಿದೆ. 2024 ರ ಐಪಿಎಲ್ ನಂತರ ವಿದೇಶಿ ಆಟಗಾರರ ಈ ಹಠಾತ್ ಹಿಂತೆಗೆತವನ್ನು ತಡೆಯಲು ಬಿಸಿಸಿಐ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತ್ತು. ಅದರಂತೆ ಹರಾಜಿನಲ್ಲಿ ಮಾರಾಟವಾದ ನಂತರ ಐಪಿಎಲ್ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡ ಯಾವುದೇ ವಿದೇಶಿ ಆಟಗಾರನನ್ನು ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ನಿಂದ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ. ಈ ಅವಧಿಯಲ್ಲಿ, ಆಟಗಾರನು ತನ್ನ ಹೆಸರನ್ನು ಹರಾಜಿಗೆ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಡಕೆಟ್ ಮುಂದಿನ 2 ವರ್ಷಗಳ ಕಾಲ ಐಪಿಎಲ್ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಬೆನ್ ಡಕೆಟ್ಗೂ ಮೊದಲು ಇಂಗ್ಲೆಂಡ್ ಏಕದಿನ ಮತ್ತು ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ ಕೂಡ ಇದೇ ರೀತಿಯ ಕೆಲಸ ಮಾಡಿದ್ದರು. 2025 ರ ಸೀಸನ್ ಪ್ರಾರಂಭವಾಗುವ ಮೊದಲು ಬ್ರೂಕ್ ಐಪಿಎಲ್ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಿದ್ದರು. ಇದರ ಪರಿಣಾಮವಾಗಿ ಅವರನ್ನು ಪ್ರಸ್ತುತ ಐಪಿಎಲ್ನಿಂದ ನಿಷೇಧಿಸಲಾಗಿದೆ. ಇದೀಗ ಅವರು 2028 ರ ಐಪಿಎಲ್ನಲ್ಲಿ ಆಡಬಹುದಾಗಿದೆ. ಮತ್ತೊಂದೆಡೆ, ಬೆನ್ ಡಕೆಟ್ 2029 ರ ಸೀಸನ್ವರೆಗೂ ಐಪಿಎಲ್ನಲ್ಲಿ ಆಡಲು ಕಾಯಬೇಕಿದೆ.




