ಉಪಚುನಾವಣೆ: ದಾವಣಗೆರೆ, ಬಾಗಲಕೋಟೆ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್! ಸಚಿವರು, ಶಾಸಕರಿಗೆ ಜವಾಬ್ದಾರಿ

ಉಪಚುನಾವಣೆ: ದಾವಣಗೆರೆ, ಬಾಗಲಕೋಟೆ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್! ಸಚಿವರು, ಶಾಸಕರಿಗೆ ಜವಾಬ್ದಾರಿ

ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ ಉಪಚುನಾವಣೆ (By Election) ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಬೈಎಲೆಕ್ಷನ್ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜಭವನ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ (CLP) ಸಭೆಯಲ್ಲಿ ಉಪಚುನಾವಣೆ ಕುರಿತಂತೆ ಮಹತ್ವದ ಚರ್ಚೆಗಳು ನಡೆದವು. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಮತ್ತು ಶಾಸಕರು ಭಾಗವಹಿಸಿದರು.

ಸಭೆಯಲ್ಲಿ ಮಾತನಾಡಿದ ಸುರ್ಜೇವಾಲ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು, ಗೆಲ್ಲಲೇಬೇಕು ಎಂದು ಸೂಚನೆ ನೀಡಿದರು. ಎಲ್ಲಾ ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಕಡ್ಡಾಯವಾಗಿ ಕನಿಷ್ಠ 10 ದಿನ ಕ್ಷೇತ್ರದಲ್ಲೇ ತಂಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಮುಸ್ಲಿಮರ ಅಸಮಾಧಾನ ಶಮನ ಹೊಣೆ ಜಮೀರ್, ತನ್ವೀರ್​ಗೆ!

ಸಮುದಾಯವಾರು ಮತಗಳನ್ನು ಸೆಳೆಯುವ ಉದ್ದೇಶದಿಂದ ಪ್ರತ್ಯೇಕ ನಾಯಕರಿಗೆ ಜವಾಬ್ದಾರಿಗಳನ್ನು ಹಂಚಲಾಗಿದ್ದು, ಮತ ಬ್ಯಾಂಕ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಪರಿವರ್ತಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಅಲ್ಪಸಂಖ್ಯಾತರ ಅಸಮಾಧಾನ ಶಮನಗೊಳಿಸುವ ಹೊಣೆಗಾರಿಕೆಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ತನ್ವೀರ್ ಸೇಠ್ ಅವರಿಗೆ ನೀಡಲಾಗಿದೆ.

ಇನ್ನೊಂದೆಡೆ, ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು, ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 20ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಯಾರು ವಾಪಸ್ ಪಡೆಯುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಹಣ ಅಕ್ರಮ ಸಾಗಾಟದ ಮೇಲೆ ಅಧಿಕಾರಿಗಳ ಕಟ್ಟುನಿಟ್ಟಿನ ನಿಗಾ

ಚುನಾವಣಾ ಕಾವಿನ ನಡುವೆ ಅಕ್ರಮ ಹಣ ಸಾಗಣೆ ಮೇಲೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 6.17 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಸಹ 10 ಲಕ್ಷಕ್ಕೂ ಹೆಚ್ಚು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: 23 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ, ಕಾಂಗ್ರೆಸ್​ಗೆ ಟೆನ್ಷನ್!

ಒಟ್ಟಾರೆ, ಉಪಚುನಾವಣೆ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳ ತೀವ್ರ ಪೈಪೋಟಿಯ ನಡುವೆ ಮತದಾರರ ಗಮನ ಸೆಳೆಯಲು ಭರ್ಜರಿ ತಂತ್ರಗಳು ಜಾರಿಗೆ ಬರುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *