2026 ರ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ಬೆಂಗಳೂರಿನಲ್ಲಿ ಮುಖಾಮುಖಿಯಾಗುತ್ತಿವೆ. ಆದಾಗ್ಯೂ ಈ ಪಂದ್ಯಕ್ಕೂ ಮುನ್ನ ಸನ್ರೈಸರ್ಸ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟೂರ್ನಿ ಆರಂಭಕ್ಕೂ ಮುನ್ನ ತಂಡವನ್ನು ಕೂಡಿಕೊಂಡಿದ್ದಾರೆ.
ವಾಸ್ತವವಾಗಿ ಇಂಜುರಿಯಿಂದ ಬಳಲುತ್ತಿದ್ದ ಪ್ಯಾಟ್ ಕಮ್ಮಿನ್ಸ್, ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಅದರಂತೆ ಫ್ರಾಂಚೈಸಿ ಕೂಡ ಇಶಾನ್ ಕಿಶನ್ಗೆ ತಂಡದ ನಾಯಕತ್ವದ ಜವಾಬ್ದಾರಿವಹಿಸಿತ್ತು. ಇದೀಗ ಪ್ಯಾಟ್ ಕಮ್ಮಿನ್ಸ್ ತಂಡ ಸೇರಿಕೊಂಡಿದ್ದಾರೆಯಾದರೂ ಇಶಾನ್ ಕಿಶನ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಇದಕ್ಕೆ ಕಾರಣವೂ ಇದ್ದು, ಪ್ಯಾಟ್ ಕಮ್ಮಿನ್ಸ್ ತಂಡವನ್ನು ಕೂಡಿಕೊಂಡಿದ್ದರೂ ಅವರು ಆರಂಭಿಕ ಕೆಲವು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ವರದಿಯಾಗಿದೆ. ಅಂದರೆ ಕಮ್ಮಿನ್ಸ್ ಆರ್ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲೂ ಕಣಕ್ಕಿಳಿಯುವುದಿಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಕಮ್ಮಿನ್ಸ್ ಐಪಿಎಲ್ ದ್ವಿತೀಯಾರ್ಧದಿಂದ ಕಣಕ್ಕಿಳಿಯಲಿದ್ದಾರೆ. ಹಾಗಿದ್ದಲ್ಲಿ, ಕಮ್ಮಿನ್ಸ್ ಕನಿಷ್ಠ ಮೊದಲ 7-8 ಪಂದ್ಯಗಳನ್ನು ತಪ್ಪಿಸಿಕೊಳ್ಳುವುದು ಖಚಿತ.
ಇದಕ್ಕೆ ಪೂರಕವಾಗಿ ಇತ್ತೀಚೆಗೆ 'ಬಿಸಿನೆಸ್ ಆಫ್ ಸ್ಪೋರ್ಟ್ಸ್' ಎಂಬ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ್ದ ಪ್ಯಾಟ್ ಕಮ್ಮಿನ್ಸ್, ನಾನು ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ಐಪಿಎಲ್ನ ಆರಂಭಿಕ ಪಂದ್ಯಗಳಲ್ಲಿ ಆಡುವುದಿಲ್ಲ. ಲೀಗ್ನ ದ್ವಿತೀಯಾರ್ಧದಲ್ಲಿ ಆಡುವ ಸಾಧ್ಯತೆಯಿದೆ ಎಂದಿದ್ದರು. ಹಾಗೆಯೇ ದ್ವಿತೀಯಾರ್ಧದಲ್ಲಿ ತಂಡ ಕೂಡಿಕೊಂಡು ಫೈನಲ್ನಲ್ಲಿ ಆಡುವ ಭರವಸೆಯನ್ನೂ ವ್ಯಕ್ತಪಡಿಸಿದ್ದರು.
ಪ್ಯಾಟ್ ಕಮ್ಮಿನ್ಸ್ ಅವರ ಈ ಹೇಳಿಕೆಯಿಂದ ಐಪಿಎಲ್ನ ಮೊದಲಾರ್ಧದಲ್ಲಿ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಇಶಾನ್ ಕಿಶನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ನಾಯಕನಾಗಿ ಅದ್ಭುತ ದಾಖಲೆ ಹೊಂದಿರುವ ಇಶಾನ್ ಕಿಶನ್, ನಾಯಕನಾಗಿ 29 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 24 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ.




