
ಬೆಂಗಳೂರನ್ನು (Bengaluru) ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಯಲಾಗುತ್ತದೆ. ಇಲ್ಲಿನ ಉದ್ಯಾನಗಳು ಬಹಳ ಜನಪ್ರಿಯ. ಆದರೆ ಅದರಷ್ಟೆ ಜನಪ್ರಿಯ ಬೆಂಗಳೂರಿನ ದೋಸೆಗಳು. ಬೆಂಗಳೂರಿನ ತರ-ತರಹದ ದೋಸೆಗಳನ್ನು ಸವಿಯಲು ನಾನಾ ಕಡೆಗಳಿಂದ ಜನ ಬರುತ್ತಾರೆ. ವಿದೇಶಗಳಿಂದಲೂ ಸಹ ಫುಡ್ ವ್ಲಾಗರ್ಗಳು ಬೆಂಗಳೂರಿಗೆ ಬರುವುದು ಇಲ್ಲಿನ ದೋಸೆಗಳನ್ನು ಎಕ್ಸ್ಪ್ಲೋರ್ ಮಾಡಲೆಂದೇ. ಶತಮಾನಕ್ಕೂ ಹಳೆಯ ಕೆಲ ದೋಸೆ ಹೋಟೆಲ್ಗಳು ಬೆಂಗಳೂರಿನಲ್ಲಿವೆ. ಅರ್ಧ ಶತಮಾನ ದಾಟಿದ ಹಲವು ಹೋಟೆಲ್ಗಳಿವೆ. ಇದೀಗ ಟಾಲಿವುಡ್ನ ಸ್ಟಾರ್ ನಟರೊಬ್ಬರು ದೋಸೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ವಿಕ್ಟರಿ ವೆಂಕಟೇಶ್ ಎಂದೇ ಖ್ಯಾತರಾಗಿರುವ ಟಾಲಿವುಡ್ನ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಅವರು ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಿದ್ದರು, ಅದೂ ಬೆಂಗಳೂರಿನ ಬೆಸ್ಟ್ ದೋಸೆ ಸವಿಯಲು. ವೆಂಕಟೇಶ್ ಅವರು ಭೇಟಿ ನೀಡಿದ್ದು ಬೆಂಗಳೂರಿನ ಹೆಮ್ಮೆಯ ವಿದ್ಯಾರ್ಥಿ ಭವನ್ ಹೋಟೆಲಿಗೆ. ಗಾಂಧಿ ಬಜಾರಿನ ಈ ನೂರು ವರ್ಷಕ್ಕೂ ಹಳೆಯ ಹೋಟೆಲ್ಗೆ ಭೇಟಿ ನೀಡಿದ ವೆಂಕಟೇಶ್ ಅವರು ಹೋಟೆಲ್ನ ಹಲವು ಖಾದ್ಯಗಳನ್ನು ಸವಿದಿದ್ದಾರೆ.
ಮೊದಲಿಗೆ ಮೃದುವಾದ ಇಡ್ಲಿ ಮತ್ತು ಗರಿ-ಗರಿಯಾದ ವಡೆಯೊಂದಿಗೆ ಉಪಹಾರ ಆರಂಭಿಸಿದ ವೆಂಕಟೇಶ್. ಆ ಬಳಿಕ ಚೌ-ಚೌ ಬಾತು ಸವಿದಿದ್ದಾರೆ. ಬಳಿಕ ವಿದ್ಯಾರ್ಥಿ ಭವನದ ಬಲು ಫೇಮಸ್ ಮಸಾಲೆ ದೋಸೆ ಸವಿದು, ರುಚಿಗೆ ಮಾರು ಹೋಗಿದ್ದಾರೆ. ಒಂದು ಒಳ್ಳೆಯ ಫಿಲ್ಟರ್ ಕಾಫಿ ಜೊತೆಗೆ ಅಂತ್ಯ ಮಾಡಿದ್ದಾರೆ. ರುವಿಗೆ ಫಿದಾ ಆದ ವೆಂಕಟೇಶ್ ಅವರು ವಿದ್ಯಾರ್ಥಿ ಭವನ ಸಿಬ್ಬಂದಿ ಜೊತೆಗೆ ಹಾಗೂ ಮಾಲೀಕರ ಜೊತೆಗೆ ಮಾತನಾಡಿ, ಅವರೊಟ್ಟಿಗೆ ಚಿತ್ರಗಳನ್ನು ಸಹ ತೆಗೆಸಿಕೊಂಡಿದ್ದಾರೆ.
ಇದನ್ನೂ ಓದಿ:IPL 2026: ‘ಐಪಿಎಲ್ಗೆ ಚಿನ್ನಸ್ವಾಮಿ ರೆಡಿ ಇದ್ರು ಆರ್ಸಿಬಿ ಮನಸ್ಸು ಮಾಡ್ತಿಲ್ಲ’; ವೆಂಕಟೇಶ್ ಪ್ರಸಾದ್
ವಿಶೇಷವೆಂದರೆ ವೆಂಕಟೇಶ್ ಅವರ ಈ ಹಿಂದಿನ ಸಿನಿಮಾ ‘ಮನ ಶಂಕರ ವರ ಪ್ರಸಾದ್’ನಲ್ಲಿ ವೆಂಕಟೇಶ್ ಅವರು ಕರ್ನಾಟಕದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾನಲ್ಲಿ ಕನ್ನಡದಲ್ಲೇ ಮಾತನಾಡಿದ್ದರು ಸಹ. ಆ ಸಿನಿಮಾ ಮಾತ್ರವಲ್ಲ, ಈ ಹಿಂದೆ ಇನ್ನೂ ಕೆಲವು ಸಿನಿಮಾಗಳಲ್ಲಿ ವೆಂಕಟೇಶ್ ಅವರು ಕನ್ನಡಿಗನಾಗಿ ನಟಿಸಿದ್ದಿದೆ. ತೆಲುಗು ಸಿನಿಮಾಗಳಲ್ಲಿ ಕನ್ನಡದಲ್ಲಿ ಮಾತನಾಡಿದ್ದೂ ಸಹ ಇದೆ.
ವೆಂಕಟೇಶ್ ಅವರ ಪುತ್ರಿ ಆಶ್ರಿತಾ ದಗ್ಗುಬಾಟಿ ಸ್ವತಃ ಬೇಕರ್ ಮತ್ತು ಫುಡ್ ವ್ಲಾಗರ್ ಸಹ ಆಗಿದ್ದಾರೆ. ಭಿನ್ನ-ಭಿನ್ನ ರೀತಿಯ ಖಾದ್ಯಗಳನ್ನು ಎಕ್ಸ್ಪ್ಲೋರ್ ಮಾಡುತ್ತಿರುತ್ತಾರೆ. ತಮ್ಮ ಮನೆಯಲ್ಲಿ ಮಾಡುವ ಅಡುಗೆ ಸೇರಿದಂತೆ ಹಲವು ಭಿನ್ನ ರೀತಿಯ ತಿಂಡಿ-ತಿನಿಸುಗಳ ವ್ಲಾಗಿಂಗ್ ಸಹ ಅವರು ಮಾಡಿದ್ದಾರೆ. ವೆಂಕೇಶ್ ಅವರ ಅಣ್ಣನ ಮಗ, ಖ್ಯಾತ ನಟ ರಾಣಾ ದಗ್ಗುಬಾಟಿ ಸಹ ಒಮ್ಮೆ ಹೇಳಿದಂತೆ ದಗ್ಗುಬಾಟಿ ಕುಟುಂಬದ ಎಲ್ಲರೂ ಆಹಾರ ಪ್ರಿಯರಂತೆ. ಅಂತೆಯೇ ವೆಂಕಟೇಶ್ ಸಹ, ಹಾಗಾಗಿ ಅವರು ದೋಸೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ