
ಚಿತ್ರರಂಗದಲ್ಲಿ ಗೆಲ್ಲುತ್ತಿದ್ದವರಿಗೆ ಮಾತ್ರವೇ ಗೌರವ. ಕೆಳಗೆ ಬಿದ್ದರೆ ಸಾಕು ಆಳಿಗೊಂದು ಕಲ್ಲು ಒಗೆಯುತ್ತಾರೆ. ‘ಗಜಿನಿ’, ‘ತುಪಾಕಿ’, ‘ಕತ್ತಿ’, ‘ಸ್ಟಾಲಿನ್’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಖ್ಯಾತ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಅವರಿಗೆ ಇತ್ತೀಚೆಗೆ ಸಮಯ ಸರಿ ಇದ್ದಂತಿಲ್ಲ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆಗೆ ಮಾಡಿದ ಸಿನಿಮಾ ಇನ್ನಿಲ್ಲದಂತೆ ಸೋತಿತು. ಸಿನಿಮಾ ಸೋತಿದ್ದಕ್ಕೆ ಸಲ್ಮಾನ್ ಖಾನ್ ಬೇಜವಾಬ್ದಾರಿತನ ಕಾರಣ ಎಂದು ಮುರುಗದಾಸ್ ದೂರಿದ್ದರು. ಬಳಿಕ ಅವರು ತಮಿಳಿನಲ್ಲಿ ನಿರ್ದೇಶಿಸಿದ ‘ಮದರಾಸಿ’ ಸಿನಿಮಾ ಸಹ ತೋಪಾಯ್ತು. ಇದೀಗ ಅದರ ಬೆನ್ನಲ್ಲೆ ಮುರುಗದಾಸ್ ವಿರುದ್ಧ ದೂರು ದಾಖಲಾಗಿದೆ. ಅದೂ ಅವರದ್ದೇ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕರಿಂದ.
ಮುರುಗದಾಸ್ ನಿರ್ದೇಶಿಸಿದ್ದ ‘ಮದರಾಸಿ’ ಸಿನಿಮಾದ ನಿರ್ಮಾಪಕರು ಇದೀಗ ಮುರುಗದಾಸ್ ವಿರುದ್ಧ ಬಜೆಟ್ಗೆ ಸಂಬಂಧಿಸಿದಂತೆ ಕೇಸು ದಾಖಲಿಸಿದ್ದಾರೆ. ‘ಮದರಾಸಿ’ ಸಿನಿಮಾವನ್ನು ಶ್ರೀ ಲಕ್ಷ್ಮಿ ಫಿಲಮ್ಸ್ ನಿರ್ಮಾಣ ಮಾಡಿತ್ತು. ಶ್ರೀಲಕ್ಷ್ಮಿ ಪ್ರಸಾದ್ ಸಿನಿಮಾದ ನಿರ್ಮಾಪಕರು. ಇದೀಗ ಅವರೇ ಮುರುಗದಾಸ್ ವಿರುದ್ಧ ಕೇಸು ದಾಖಲಿಸಿದ್ದಾರೆ. ‘ಮದರಾಸಿ’ ಸಿನಿಮಾದ ಬಜೆಟ್ ಅನ್ನು ಮುರುಗದಾಸ್ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಲ್ಮಾನ್ ಖಾನ್ ವಿರುದ್ಧ ಬೇಜವಾಬ್ದಾರಿಯ ಆರೋಪ ಮಾಡಿದ್ದ ಮುರುಗದಾಸ್ ವಿರುದ್ಧ ಈಗ ಬೇಜವಬ್ದಾರಿ ಆರೋಪ ಬಂದಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಮುರುಗದಾಸ್ ಅವರು ಮೊದಲು ಸಿನಿಮಾಕ್ಕೆ 115 ಕೋಟಿ ಬಜೆಟ್ ನಿಗದಿ ಪಡಿಸಿದ್ದರಂತೆ. ಆದರೆ ಮುರುಗದಾಸ್ ಅವರ ಬೇಜವಾಬ್ದಾರಿತನ ಮತ್ತು ಸೂಕ್ತ ಪ್ಲಾನಿಂಗ್ ಇಲ್ಲದ ಕಾರಣದಿಂದಾಗಿ ಸಿನಿಮಾದ ಬಜೆಟ್ 170 ಕೋಟಿ ರೂಪಾಯಿಗಳಾಯ್ತು ಎಂದು ನಿರ್ಮಾಣ ಸಂಸ್ಥೆ ಆರೋಪಿಸಿದೆ. ಮುರುಗದಾಸ್ ಅವರು ಸರಿಯಾಗಿ ಪ್ಲಾನಿಂಗ್ ಮಾಡಲಿಲ್ಲ, ಹಾಗೂ ಒಂದೇ ಸಮಯದಲ್ಲಿ ಎರಡೆರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರಿಂದ ಬಜೆಟ್ ಹೆಚ್ಚಾಯ್ತು. ಆಗಿರುವ ನಷ್ಟದಲ್ಲಿ 10 ಕೋಟಿ ಹಣವನ್ನು ಮುರುಗದಾಸ್ ಮರಳಿ ಕೊಡಬೇಕು ಎಂದು ನಿರ್ಮಾಪಕರು ಒತ್ತಾಯಿಸಿದ್ದಾರೆ.
ಅನಿರೀಕ್ಷಿತ ಆರ್ಥಿಕ ಹೊರೆಯಿಂದ ಬೇಸತ್ತ ನಿರ್ಮಾಪಕರು ನಿರ್ದೇಶಕರು ಮತ್ತು ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಿ ಮುರುಗದಾಸ್ ವಿರುದ್ಧ ದೂರು ನೀಡಿದ್ದು, 10 ಕೋಟಿ ರೂ. ಪರಿಹಾರ ಕೊಡಿಸಬೇಕೆಂದು ಕೋರಿದ್ದರು. ಅದರಂತೆ ಈ ಬಗ್ಗೆ ಮಾತುಕತೆ ನಡೆದಿದ್ದು, ಒಂದು ಒಪ್ಪಂದಕ್ಕೆ ಬರಲಾಗಿದೆ. ಇದರನ್ವಯ ಮುರುಗದಾಸ್ ಅವರು ‘ರಮಣ 2’ (ತೆಲುಗು ಆವೃತ್ತಿ) ಚಿತ್ರಕ್ಕೆ ಯಾವುದೇ ಸಂಭಾವನೆ ಪಡೆಯದೆ ಕಥೆಯನ್ನು ಬರೆದುಕೊಡಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕರಿಗೆ ಉಂಟಾದ ಆರ್ಥಿಕ ನಷ್ಟವನ್ನು ಸರಿಹೂಗಿಸಲು ನಿರ್ಧರಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ