ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನಲ್ಲಿ ಆರಿಲ್ಲ ಭಿನ್ನಮತ ಬಿಸಿ! ಬಾಗಲಕೋಟೆಯಲ್ಲಿ ರಂಗೇರಿದ ಪ್ರಚಾರದ ಕಣ

ಕರ್ನಾಟಕ ಉಪಚುನಾವಣೆ 2026: ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನಲ್ಲಿ ಆರಿಲ್ಲ ಭಿನ್ನಮತ ಬಿಸಿ! ಬಾಗಲಕೋಟೆಯಲ್ಲಿ ರಂಗೇರಿದ ಪ್ರಚಾರದ ಕಣ

ದಾವಣಗೆರೆ, ಬಾಗಲಕೋಟೆ, ಮಾರ್ಚ್ 30: ಕರ್ನಾಟಕದಲ್ಲಿ ಉಪಚುನಾವಣೆಯ (Karnataka By Election) ಅಖಾಡ ದಿನೇ ದಿನೇ ರಂಗೇರುತ್ತಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಭಾರೀ ಪೈಪೋಟಿ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಮತ್ತು ಮುನಿಸಿನ ಚರ್ಚೆಗಳು ಜೋರಾಗಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸಾಕಷ್ಟು ಒತ್ತಾಯಿಸಿದ್ದರು. ಮುಸ್ಲಿಂ ಮುಖಂಡ ಸಾಧಿಕ್ ಪೈಲ್ವಾನ್​​ಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದಲ್ಲದೇ, ಎಷ್ಟು ಖರ್ಚಾದರೂ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೂ ಟಿಕೆಟ್ ಸಿಕ್ಕಿಲ್ಲ.

ಕೊನೆಗೆ ಹೈಕಮಾಂಡ್ ಶಾಮನೂರು ಕುಟುಂಬದ ಸಮರ್ಥ್​​ಗೆ ಟಿಕೆಟ್ ನೀಡಿದ ಬಳಿಕ ಜಮೀರ್ ಅಹ್ಮದ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿಯೇ ಜಮೀರ್ ಅಹ್ಮದ್ ದಾವಣಗೆರೆ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇರಳ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾದ ಜಮೀರ್

ಇದೀಗ ಜಮೀರ್ ಕೇರಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದು, ವಯನಾಡಿನ ಕಲ್ಪೆಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ಧಿಕ್ ಪರ ಮತಯಾಚನೆ ನಡೆಸುತ್ತಿದ್ದಾರೆ. ಅಲ್ಲಿಯೂ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ಪ್ರಚಾರ ನಡೆಸುತ್ತಿದ್ದಾರೆ.

ಮುಸ್ಲಿಮರಿಗೆ ಟಿಕೆಟ್ ನೀಡದೆ ಕಾಂಗ್ರೆಸ್​ನಿಂದ ಮೋಸ: ಬಿಜೆಪಿ

ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಮುಸ್ಲಿಮರಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಪಕ್ಷದಲ್ಲಿ ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬದಲ್ಲೇ ಸಚಿವರು ಹಾಗೂ ಸಂಸದರು ಇದ್ದಾರೆ. ಇಷ್ಟೆಲ್ಲಾ ಅಧಿಕಾರ ಇದ್ದರೂ ಮತ್ತೆ ಅಧಿಕಾರ ಬೇಕೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿ, ಬಿಜೆಪಿಯವರದ್ದೇನು ವಂಶವಾಹಿನಿ ರಾಜಕೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ನೂರಾರು ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ. ರಾಜೀವ್ ಗಾಂಧಿ ಬಡಾವಣೆ, ಎಸ್.ಎಂ. ಕೃಷ್ಣನಗರ ಹಾಗೂ ಎಸ್‌ಪಿಎಸ್ ನಗರ ಪ್ರದೇಶಗಳಲ್ಲಿ ಮತದಾರರನ್ನು ಭೇಟಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ರಂಗೇರಿದ ಚುನಾವಣಾ ಕಣ

ಅತ್ತ ಬಾಗಲಕೋಟೆ ಕ್ಷೇತ್ರದಲ್ಲೂ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮತ್ತು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಾರ್ಚ್ 30, 31 ಹಾಗೂ ಏಪ್ರಿಲ್ 3, 4, 6ರಂದು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಈ ನಡುವೆ ದಿವಂಗತ ಶಾಸಕ ಹೆಚ್.ವೈ. ಮೇಟಿ ಪುತ್ರಿ ಬಾಯಕ್ಕ, ತಮ್ಮ ಸಹೋದರ ಉಮೇಶ್ ಮೇಟಿ ಪರ ಪ್ರಚಾರ ನಡೆಸುವ ವೇಳೆ ತಂದೆಯನ್ನು ನೆನೆದು ಕಣ್ಣೀರಿಟ್ಟ ಘಟನೆ ಕೂಡ ಗಮನ ಸೆಳೆಯಿತು.

ಇದನ್ನೂ ಓದಿ: ‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!

ಇದಲ್ಲದೆ ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಪರ ತಿಮ್ಮಾಪುರ ಮತ್ತು ಬಿಜೆಪಿ ಪರ ರಾಮುಲು ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ‘ಗೋ ಬ್ಯಾಕ್ ರಾಮುಲು’ ಎಂದು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಕೈಕೈ ವಿಲಾಯಿಸುವ ತಲುಪಿತ್ತು.

ವರದಿ: ದಾವಣಗೆರೆಯಿಂದ ಬಸವರಾಜ ದೊಡ್ಮನಿ ಜೊತೆ ರವಿ ಮೂಕಿ, ಟಿವಿ9 ಬಾಗಲಕೋಟೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *