
ಶಿವಮೊಗ್ಗ/ನೆಲಮಂಗಲ, ಮಾರ್ಚ್ 30: ಲಾರಿಗೆ ಬೈಕ್ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್ಪಿ ಬಳಿ ನಡೆದಿದೆ. ಬೈಕ್ನಲ್ಲಿದ್ದ ಬಾಬು(30), ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ದೇಗುಲಕ್ಕೆ ತೆರಳಿ ಹಿಂದಿರುಗುವಾಗ ಅಪಘಾತ: ಓರ್ವ ಸಾವು
ದೇವಸ್ಥಾನಕ್ಕೆ ತೆರಳಿ ಸಹೋದರರು ಹಿಂದಿರುಗುತ್ತಿದ್ದ ವೇಳೆ ನಡೆದ ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಬಳಿ ನಡೆದಿದೆ. ಶ್ರೀನಿವಾಸ್ (68) ಮೃತ ವ್ಯಕ್ತಿಯಾಗಿದ್ದು, ವೆಂಕಟಾಚಲ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕ ಮದುರೈ ದೇವಸ್ಥಾನಕ್ಕೆ ತೆರಳಿದ್ದ ಇವರು ನೈಸ್ ರೋಡ್ ಮಾರ್ಗವಾಗಿ ಹಿಂದಿರುಗುವ ವೇಳೆ ದುರ್ಘಟನೆ ನಡೆದಿದೆ. ಇವರಿಬ್ಬರೂ ಕನಕಪುರದ ಹಾರೋಹಳ್ಳಿ ನಿವಾಸಿಗಳಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ನೆಲಮಂಗಲ ಶವಗಾರಕ್ಕೆ ಶ್ರೀನಿವಾಸ್ ಮೃತದೇಹವನ್ನು ರವಾನಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಖಾಸಗಿ ಆಸ್ಪತ್ರೆ ಎಡವಟ್ಟು?; ಹರ್ನಿಯಾ ಆಪರೇಷನ್ ಬಳಿಕ ಕೋಮಾಗೆ ಜಾರಿದ ಮಹಿಳೆ
ಹಿಟ್ ಆ್ಯಂಡ್ ರನ್ಗೆ ಯುವಕ ಬಲಿ
ಮೈಸೂರಿನ ಬೈಲಕುಪ್ಪೆಯಲ್ಲಿ ನಡೆದ ಹಿಟ್ ಆ್ಯಂಡ್ ರನ್ನಲ್ಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನಿಲ್ ಮೃತನಾಗಿದ್ದು, ಸ್ನೇಹಿತನ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕೊಂಡೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದೆ. ಕುಶಾಲನಗರದಿಂದ ಬೈಲಕುಪ್ಪೆಗೆ ಅಗಮಿಸುತ್ತಿದ್ದ ವೇಳೆ ಅಪರಿಚಿತ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಬೈಕಿಗೆ ಗುದ್ದಿದ್ದು, ನೆಲದ ಮೇಲೆ ಬಿದ್ದ ಅನಿಲ್ ಮೇಲೆ ಅದೇ ಕಾರು ಹರಿದ ಪರಿಣಾಮ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಎಸ್ಕೇಪ್ ಆಗಿದ್ದು, ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.