
ಒಂದು ಚಿತ್ರರಂಗದ (Movie Industry) ದೊಡ್ಡ ಸ್ಟಾರ್ಗಳು ಮತ್ತೊಂದು ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದು ತೀರಾ ಸಾಮಾನ್ಯ. ಹಲವು ದಶಕಗಳಿಂದಲೂ ಇದು ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹವಾ ಹೆಚ್ಚಾದ ಬಳಿಕ ಈ ಸಂಪ್ರದಾಯ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಮಲಯಾಳಂ ಚಿತ್ರರಂಗದ ಸ್ಟಾರ್ ನಟರನ್ನು ಬೇರೆ ಬೇರೆ ಭಾಷೆಯ ಚಿತ್ರರಂಗದವರು ತುಸು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ಮೋಹನ್ಲಾಲ್ ಇನ್ನೂ ಹಲವು ನಟರು ಪರ ಭಾಷೆಯ ಸ್ಟಾರ್ ನಟರುಗಳೊಡನೆ ನಟಿಸಿದ್ದಾರೆ. ಆದರೆ ಇದೀಗ ಮಲಯಾಳಂ ಸ್ಟಾರ್ ನಟರಲ್ಲಿ ಒಬ್ಬರಾದ ಟೊವಿನೊ ಥಾಮಸ್, ಜೂ ಎನ್ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಆಯ್ಕೆ ಆಗಿದ್ದರು, ಆದರೆ ಸಿನಿಮಾದಿಂದ ಹೊರಬಂದಿದ್ದು, ಟಾಲಿವುಡ್ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ನಿರ್ದೇಶಿಸಿ, ಜೂ ಎನ್ಟಿಆರ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಕನ್ನಡದ ರುಕ್ಮಿಣಿ ವಸಂತ್ ಈ ಸಿನಿಮಾದ ನಾಯಕಿ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಭಿನ್ನ ರೀತಿಯ ಕತೆಯನ್ನು ಸಿನಿಮಾಕ್ಕಾಗಿ ಹೆಣೆದಿರುವುದಾಗಿ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು. ಅವರ ಈ ಹಿಂದಿನ ಸಿನಿಮಾ ‘ಸಲಾರ್’ನಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ಸಹ ನೀಲ್ ಹಾಕಿಕೊಂಡಿದ್ದರು. ಈ ಬಾರಿ ಜೂ ಎನ್ಟಿಆರ್ ಸಿನಿಮಾಕ್ಕೆ ಮಲಯಾಳಂನ ಟೊವಿನೊ ಥಾಮಸ್ ಅವರನ್ನು ಪ್ರಶಾಂತ್ ನೀಲ್ ಕಾಸ್ಟ್ ಮಾಡಿದ್ದರು. ಆದರೆ ಅವರು ಸಿನಿಮಾನಿಂದ ಹೊರಬಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟೊವಿನೊ ಥಾಮಸ್, ‘ನಾನು ಜೂ ಎನ್ಟಿಆರ್ ಸಿನಿಮಾನಲ್ಲಿ ನಟಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನಗೆ ತೆಲುಗು ಸಿನಿಮಾನಲ್ಲಿ ನಟಿಸುವ ಆಸೆ ಇತ್ತು. ಆದರೆ ಈ ಚಿತ್ರರಂಗದ ಪದ್ಧತಿಗಳು ನಮ್ಮ ಮಲಯಾಳಂ ಚಿತ್ರರಂಗಕ್ಕಿಂತಲೂ ಬಹಳ ಭಿನ್ನ. ನಾವು ಒಂದು ಶೆಡ್ಯೂಲ್ನಲ್ಲಿ ಸಿನಿಮಾ ಮುಗಿಸಿಬಿಡುತ್ತೇವೆ. ಆದರೆ ತೆಲುಗು ಚಿತ್ರರಂಗದವರು ಹಲವು ಶೆಡ್ಯೂಲ್ಗಳಲ್ಲಿ ಚಿತ್ರೀಕರಣ ಮಾಡುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ:‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’
ಮಾತು ಮುಂದುವರೆಸಿ, ‘ನಾನು ಒಂದು ಅವಧಿಯಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಒಂದು ಸಿನಿಮಾನಲ್ಲಿ ನಟಿಸುವಾಗ ಬೇರೆ ಸಿನಿಮಾನಲ್ಲಿ ನಟಿಸುವುದಿಲ್ಲ. ಆದರೆ ನಾನು ತೆಲುಗು ಸಿನಿಮಾ ಒಪ್ಪಿಕೊಂಡರೆ ಅದನ್ನು ಮುಗಿಸಲು ಸುಮಾರು ಒಂದು ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ ನಾನು ನಾಲ್ಕೈದು ಮಲಯಾಳಂ ಸಿನಿಮಾ ಮುಗಿಸುತ್ತೀನಿ. ನಾನು ತೆಲುಗು ಸಿನಿಮಾನಲ್ಲಿ ನಟಿಸಿದರೆ ನಾನು ಒಪ್ಪಿಕೊಂಡಿರುವ ಮಲಯಾಳಂ ಸಿನಿಮಾಗಳಿಗೆ ಕಷ್ಟವಾಗುತ್ತದೆ. ಹಾಗಾಗಿ ತೆಲುಗು ಸಿನಿಮಾನಲ್ಲಿ ನಾನು ನಟಿಸಲಿಲ್ಲ’ ಎಂದಿದ್ದಾರೆ ಟೊವಿನೊ ಥಾಮಸ್.
ಇದೀಗ ಟೊವಿನೊ ಥಾಮಸ್ ಸಿನಿಮಾದಿಂದ ಹೊರನಡೆದಿರುವ ಕಾರಣ ಪ್ರಶಾಂತ್ ನೀಲ್ ಹೊಸ ನಟರೊಬ್ಬರನ್ನು ಹುಡುಕಬೇಕಿದೆ. ಆ ಪಾತ್ರ ಕನ್ನಡದ ಯುವ ನಟನಿಗೆ ಸಿಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ