ಹಾವು ರಕ್ಷಣೆ ಕುರಿತ ಕರೆಗಳ ಏರಿಕೆಗೆ GBA ಹೈರಾಣ: ಇತ್ತ ಅಗತ್ಯ ಸೌಲಭ್ಯ, ವೇತನ ಇಲ್ಲದೆ ಸಂಕಷ್ಟದಲ್ಲಿ ಉರಗ ರಕ್ಷಕರು

ಹಾವು ರಕ್ಷಣೆ ಕುರಿತ ಕರೆಗಳ ಏರಿಕೆಗೆ GBA ಹೈರಾಣ: ಇತ್ತ ಅಗತ್ಯ ಸೌಲಭ್ಯ, ವೇತನ ಇಲ್ಲದೆ ಸಂಕಷ್ಟದಲ್ಲಿ ಉರಗ ರಕ್ಷಕರು

ಬೆಂಗಳೂರು, ಏಪ್ರಿಲ್​​ 01: ನಗರದಲ್ಲಿ ಹಾವುಗಳ ಕಾಟ ಹೆಚ್ಚಿದ್ದು ಇವುಗಳನ್ನು ಹಿಡಿಯಲು ಸಹಾಯ ಕೋರಿ ಜಿಬಿಎಗೆ ಪ್ರತಿದಿನ 150ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಆದರೆ ಈ ಸೇವೆಗೆ ಇರುವ 7 ಸದಸ್ಯರ ತಂಡಕ್ಕೆ ಎಲ್ಲ ಕರೆಗಳಿಗೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ಹಾವುಗಳು ಮೊಟ್ಟೆ ಇಡುವ ಹಾಗೂ ಮರಿ ಹೊರಬರುವ ಅವಧಿಯಾಗಿರುವುದರಿಂದ ಕರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರಕ್ಷಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು GBA ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಪಶ್ಚಿಮ ನಗರ ಪಾಲಿಕೆಯ (112 ವಾರ್ಡ್‌ಗಳು) ಹಾಗೂ ದಕ್ಷಿಣ ನಗರ ಪಾಲಿಕೆಯ (72 ವಾರ್ಡ್‌ಗಳು) ವ್ಯಾಪ್ತಿಗೆ ತಲಾ ಇಬ್ಬರು ರಕ್ಷಕರನ್ನು ನಿಯೋಜಿಸಲಾಗಿದ್ದು, ಉಳಿದ ಪಾಲಿಕೆಗಳಿಗೆ ತಲಾ ಒಬ್ಬರಂತೆ ನೇಮಕ ಮಾಡಲಾಗಿದೆ. ಇವರಿಗೆ ಮೂರು ಅಥವಾ ಐದು ತಿಂಗಳಿಗೊಮ್ಮೆ ಮಾತ್ರ 18,000 ರೂ. ಗೌರವಧನ ಸಿಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳಕ್ಕೆ ತಲುಪಿ ಹಾವುಗಳನ್ನೂ, ಜನರ ಜೀವವನ್ನೂ ರಕ್ಷಿಸುವುದು ಕಷ್ಟವಾಗುತ್ತಿದೆ. ಈ ಕೆಲಸ ಮಾನಸಿಕವಾಗಿ ಕೂಡ ಒತ್ತಡ ಉಂಟುಮಾಡುತ್ತಿದೆ ಎಂದು ಉರಗ ಸಂರಕ್ಷರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಪಾಲಿಕೆಯಿಂದ ವಾಹನ ಹಾಗೂ ಅಗತ್ಯ ಸಾಧನಗಳಿಲ್ಲದ ಕಾರಣ, ರಕ್ಷಕರು ಬೈಕ್‌ನಲ್ಲಿ ಪ್ರಯಾಣಿಸಿ,  ಹಾವು ಹಿಡಿಯುವ ಸಾಧನ (ಟಾಂಗ್), ಲೋಹದ ಹುಕ್, ಚೀಲ, ಪಿನ್ನಿಂಗ್ ಟೂಲ್, ಗೇಟರ್ಸ್ (ಕಾಲು ರಕ್ಷಣಾ ಉಪಕರಣ), ಕೈಗವಸುಗಳು ಹಾಗೂ PVC ಪೈಪ್‌ಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಬಳಸುತ್ತಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?; ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾವುಗಳಲ್ಲಿ ನಾಗರಹಾವು, ರಸೆಲ್ ವೈಪರ್, ಸ್ಪೆಕ್ಟಾಕಲ್ಡ್ ಕೋಬ್ರಾ ಮತ್ತು ಚೆಕ್ವರ್ಡ್ ಕೀಲ್‌ಬ್ಯಾಕ್ ಸೇರಿವೆ. ಬೇಸಿಗೆ ಸಮಯದಲ್ಲಿ ತಂಪು ಹುಡುಕಿಕೊಂಡು ಹಾವುಗಳು ತಮ್ಮ ವಾಸಸ್ಥಳಗಳಿಂದ ಹೊರಬಂದು ತೋಟಗಳು ಹಾಗೂ ಉದ್ಯಾನವನಗಳಿಗೆ ಬರುತ್ತವೆ. ಹಾವುಗಳು ಅನಿಶ್ಚಿತ ಸ್ವಭಾವ ಹೊಂದಿರುವುದರಿಂದ, ಜನರು ಸ್ವತಃ ಹಿಡಿಯಲು ಯತ್ನಿಸಿದರೆ ಕಚ್ಚಿಸಿಕೊಳ್ಳುವ ಅಥವಾ ಭಯದಿಂದ ಹಾವನ್ನು ಕೊಲ್ಲುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣೆ ಕಾರ್ಯ ಮಾಡುವುದು ಅಗತ್ಯ ಎಂದು ರಕ್ಷಕರು ತಿಳಿಸಿದ್ದಾರೆ. ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಮರಿ ಹೊರಬರುವ ಅವಧಿ ಹಾಗೂ ಭಾರೀ ಮಳೆಯಿಂದಾಗಿ, ದಿನಕ್ಕೆ 200ಕ್ಕೂ ಹೆಚ್ಚು ಕರೆಗಳು ಬರಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *