
ಬೆಂಗಳೂರು, ಏಪ್ರಿಲ್ 02: ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು ಅಂದರೆ ಭಾನುವಾರ ಬೆಳಿಗ್ಗೆ 2 ಗಂಟೆ ನೆರಳೆ ಮಾರ್ಗದಲ್ಲಿ ಮೆಟ್ರೋ ಸೇವೆ (Namma Metro) ತಾತ್ಕಾಲಿಕ ಸ್ಥಗಿತವಾಗಲಿದೆ. ವಿಜಯನಗರ ಮತ್ತು ಅತ್ತಿಗುಪ್ಪೆ ನಿಲ್ದಾಣಗಳಲ್ಲಿ ಅಗತ್ಯ ನಿರ್ವಹಣೆ ಕಾಮಗಾರಿ ಹಿನ್ನೆಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಭಾನುವಾರದಂದು ಮೆಟ್ರೋ ರೈಲು ಸೇವೆ ತಾತ್ಕಾಲಿಕ ಸ್ಥಗಿತ
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು (ಭಾನುವಾರ) ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯನ್ನು ನೆರವೇರಿಸಲು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 07ರಿಂದ 09 ಗಂಟೆಯವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ನಮ್ಮ ಮೆಟ್ರೋ ಟ್ವೀಟ್
Temporary Suspension of Metro Services on 05.04.2026 between Nadaprabhu Kempegowda Station-Majestic & Mysore Road Metro Station for 2 Hrs on Purple Line. For further details please check the media release. pic.twitter.com/P05m1HEJfD
— ನಮ್ಮ ಮೆಟ್ರೋ (@OfficialBMRCL) April 2, 2026
ಇತರೆ ಎಲ್ಲಾ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ದಿಂದ ಮೈಸೂರು ರಸ್ತೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ನಿಂದ ವೈಟೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಮತ್ತು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಸೇವೆಗಳು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 07 ಗಂಟೆಯಿಂದ ವೇಳಾಪಟ್ಟಿಯಂತೆ ಸಂಚರಿಸಲಿವೆ.
ಇದನ್ನೂ ಓದಿ: ಐಪಿಎಲ್ ಕ್ರೇಜ್: ಪಂದ್ಯ ಮುಗಿದ 50 ನಿಮಿಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 22,000 ಜನ ಪ್ರಯಾಣ!
ಬೆಳಿಗ್ಗೆ 09 ಗಂಟೆಯ ನಂತರ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳು ಎಂದಿನಂತೆ ಸಂಚರಿಸಲಿವೆ. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ಮತ್ತು ಸಹಕರಿಸುವಂತೆ ಬಿಎಂಆರ್ಸಿಎಲ್ ವಿನಂತಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.