
ಗದಗ, ಏಪ್ರಿಲ್ 3: ಜಿಲ್ಲೆಯಲ್ಲಿ ಮುಸುಕುಧಾರಿ ಕಳ್ಳರ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದ್ದು, ಸರಣಿ ಕಳ್ಳತನದ ಮೂಲಕ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ನಗರದ ಪುಟ್ಟರಾಜ್ ನಗರ ಮತ್ತು ಕೇಶವ್ ಪಾರ್ಕ್ ಪ್ರದೇಶದಲ್ಲಿ ನಡುರಾತ್ರಿ ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ಐವರು ಮುಸುಕುಧಾರಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಎಂಬುವವರು ಜನ್ಮದಿನದ ಕಾರ್ಯಕ್ರಮಕ್ಕೆ ತಂದೆಯ ಮನೆಗೆ ಹೋಗಿದ್ದ ವೇಳೆ, ಕಳ್ಳರು ಮನೆಯ ಬೀಗ ಮುರಿದು ಸುಮಾರು 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ರಾತ್ರಿ 8 ಗಂಟೆಯಾಗುತ್ತಿದ್ದಂತೆ ಜನ ಹೊರಬರಲು ಹೆದರುತ್ತಿದ್ದು, ಕೂಡಲೇ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.