ವಿವಾದಾತ್ಮಕ ಹೇಳಿಕೆ… ಧೋನಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ವಿವಾದಾತ್ಮಕ ಹೇಳಿಕೆ… ಧೋನಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ, ಎರಡು ಬಾರಿ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ನೀಡುತ್ತಿರುವ ಸರಣಿ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮಾಪಣೆ ಕೇಳಿದ್ದಾರೆ.

ಕ್ಷಮೆಯಾಚನೆಗೆ ಕಾರಣವೇನು?

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಕಳೆದ ಹಲವು ವರ್ಷಗಳಿಂದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.

ಧೋನಿ ವಿರುದ್ಧದ ಆರೋಪ: ಧೋನಿ ಅವರು ಬೇಕೆಂದೇ ಯುವರಾಜ್ ಸಿಂಗ್ ಅವರ ವೃತ್ತಿಜೀವನವನ್ನು ಹಾಳು ಮಾಡಿದರು ಮತ್ತು ಅವರನ್ನು ತಂಡದಿಂದ ಹೊರಹಾಕಲು ಕಾರಣರಾದರು ಎಂದು ಯೋಗರಾಜ್ ಸಿಂಗ್ ಪದೇ ಪದೇ ಹೇಳುತ್ತಿದ್ದರು.

ಕಪಿಲ್ ದೇವ್ ವಿರುದ್ಧದ ದ್ವೇಷ: 1980ರ ದಶಕದಲ್ಲಿ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಕಪಿಲ್ ದೇವ್ ಕಾರಣ ಎಂದು ಯೋಗರಾಜ್ ಅವರು ದಶಕಗಳಿಂದ ಹಗೆತನ ಸಾಧಿಸುತ್ತಿದ್ದರು. ಇತ್ತೀಚೆಗೆ ಅವರು ಕಪಿಲ್ ದೇವ್ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದರು.

ಯುವರಾಜ್ ಸಿಂಗ್ ಪ್ರತಿಕ್ರಿಯೆ:

ಸ್ಪೋರ್ಟ್ಸ್ ತಕ್ (Sports Tak) ಸಂದರ್ಶನದಲ್ಲಿ ಮಾತನಾಡಿದ ಯುವರಾಜ್ ಸಿಂಗ್ “ನಾನು ಕಪಿಲ್ ದೇವ್ ಮತ್ತು ಎಂ.ಎಸ್. ಧೋನಿ ಅವರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ತಂದೆ ಆಡುವ ಮಾತುಗಳು ಸರಿಯಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ.”

ಈ ಇಬ್ಬರೂ ದಿಗ್ಗಜರು ಭಾರತೀಯ ಕ್ರಿಕೆಟ್‌ಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ.  ತಂದೆಯ ಮಾತುಗಳು ತಮ್ಮ ವೈಯಕ್ತಿಕ ಅಭಿಪ್ರಾಯವಲ್ಲ ಮತ್ತು ತಂದೆ-ಮಗನ ನಡುವಿನ ಆಲೋಚನೆಗಳಲ್ಲಿ ವ್ಯತ್ಯಾಸವಿದೆ ಎಂದು ಯುವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಯೋಗರಾಜ್ ಸಿಂಗ್ ಮಾಡಿದ ಆರೋಪಗಳೇನು?

ಯುವರಾಜ್ ಸಿಂಗ್ ಫಾರ್ಮ್‌ನಲ್ಲಿದ್ದರೂ ಧೋನಿ ಅವರನ್ನು ತಂಡದಿಂದ ಹೊರಹಾಕಲು ಸಂಚು ರೂಪಿಸಿದರು ಮತ್ತು ಅವರ ಕ್ರಿಕೆಟ್ ಬದುಕನ್ನು ಅವಧಿಗಿಂತ ಮುನ್ನವೇ ಕೊನೆಗೊಳಿಸಿದರು ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದರು.

ಮತ್ತೊಮದು  ಸಂದರ್ಶನದಲ್ಲಿ, “ಧೋನಿಗೆ ಒಂದು ದಿನ ಗತಿ ಇಲ್ಲದಂತಾಗುತ್ತದೆ, ಅವರು ಭಿಕ್ಷೆ ಬೇಡಬೇಕಾಗುತ್ತದೆ” ಎಂದು ಶಪಿಸಿದ್ದರು.

ಹಾಗೆಯೇ  ಧೋನಿ ಕೇವಲ ತನ್ನ ಹೆಸರಿಗಾಗಿ ಆಡುತ್ತಾರೆ ಮತ್ತು ತಂಡದ ಇತರ ಪ್ರತಿಭಾವಂತ ಆಟಗಾರರನ್ನು ಬೆಳೆಯಲು ಬಿಡುವುದಿಲ್ಲ ಎಂದು ಯೋಗರಾಜ್ ಸಿಂಗ್ ದೂರಿದ್ದರು.

ಕಪಿಲ್ ದೇವ್ ಮತ್ತು ಯೋಗರಾಜ್ ಸಿಂಗ್ ಒಟ್ಟಿಗೆ ಕ್ರಿಕೆಟ್ ಆಡಿದವರು. ಆದರೆ ಯೋಗರಾಜ್ ಅವರ ಸಿಟ್ಟು ದಶಕಗಳಷ್ಟು ಹಳೆಯದು.

1981ರಲ್ಲಿ ಕೇವಲ ಒಂದು ಅಂತರಾಷ್ಟ್ರೀಯ ಪಂದ್ಯ ಆಡಿದ ನಂತರ ಯೋಗರಾಜ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಕ್ಕೆ ಕಪಿಲ್ ದೇವ್ ಅವರೇ ಕಾರಣ ಎಂದು ಯೋಗರಾಜ್ ನಂಬಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ತಮಗೆ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಸಿಟ್ಟಾಗಿ ಕಪಿಲ್ ದೇವ್ ಅವರ ಮನೆಗೆ ಪಿಸ್ತೂಲ್ ಹಿಡಿದು ಹೋಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. “ಕಪಿಲ್ ದೇವ್ ಅವರ ಕಾಲನ್ನು ಮುರಿದು ಮನೆಗೆ ಕಳುಹಿಸಬೇಕಿತ್ತು” ಎಂಬ ಅರ್ಥದಲ್ಲಿ ಮಾತನಾಡಿ ವಿವಾದ ಹುಟ್ಟು ಹಾಕಿದ್ದರು.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರಿಗೆ ದಂಡದ ಶಿಕ್ಷೆ..!

ಇದೀಗ ತಂದೆಯ ವಿವಾದಾತ್ಮಕ ಹೇಳಿಕೆಗಳಿಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ಕಪಿಲ್ ದೇವ್ ಅವರಲ್ಲಿ ಯುವರಾಜ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

Source link

Leave a Reply

Your email address will not be published. Required fields are marked *