
ಜಾನ್ಹವಿ ಕಪೂರ್ (Janhvi Kapoor), ಬಾಲಿವುಡ್ನ ಬಲು ಜನಪ್ರಿಯ ಮತ್ತು ಬೇಡಿಕೆಯ ಯುವನಟಿ. ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಹ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಜಾನ್ಹವಿ ಕಪೂರ್, ಬಾಲಿವುಡ್ನ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಮಾಡರ್ನ್ ಯುವತಿಯಾಗಿ ಕಾಣಿಸಿಕೊಳ್ಳುವ ಜಾನ್ಹವಿ, ಅಪ್ಪಟ ದೈವ ಭಕ್ತೆ. ಅದರಲ್ಲೂ ತಿರುಪತಿ ತಿಮ್ಮಪ್ಪನ ಪರಮ ಭಕ್ತೆ. ವರ್ಷದಲ್ಲಿ ಹಲವು ಭಾರಿ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡಿದ ಪ್ರತಿಬಾರಿ ಅವರು ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿಯೇ ದರ್ಶನ ಪಡೆಯುತ್ತಾರೆ. ತಾವು ಹೀಗೆ ಮಾಡುವುದು ಏಕೆ ಎಂಬುದನ್ನು ಸಹ ಜಾನ್ಹವಿ ಕಪೂರ್ ವಿವರಿಸಿದ್ದಾರೆ. ಜಾನ್ಹವಿ ಕೊಟ್ಟಿರುವ ಉತ್ತರ ತಿಮ್ಮಪ್ಪನ ಭಕ್ತರ ಮಾತ್ರವಲ್ಲ ಎಲ್ಲರ ಹೃದಯ ಗೆಲ್ಲುವಂತಿದೆ.
ದೇಶದ ಹಲವಾರು ದೇವಾಲಯಗಳಲ್ಲಿ ವಿಐಪಿ ಸಂಸ್ಕೃತಿ ಇದೆ. ಸಾಮಾನ್ಯ ಭಕ್ತರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡಬೇಕು ಆದರೆ ಹಣ ಇದ್ದರು ಅಥವಾ ಪ್ರಭಾವಿಗಳು ಹಣ ನೀಡಿದರೆ ಅವರಿಗೆ ವಿಶೇಷ ದರ್ಶನ ಸಿಗುತ್ತದೆ. ತಿರುಪತಿಯಲ್ಲೂ ಈ ವಿಶೇಷ ದರ್ಶನ ಸೌಲಭ್ಯ ಇದೆ. ಅದರಲ್ಲೂ ವಿವಿಐಪಿಗಳು ಕೆಲ ಸಮಯವೂ ಕಾಯುವಂತಿಲ್ಲ ಅವರಿಗೆ ನೇರ ದರ್ಶನ ವ್ಯವಸ್ಥೆ ಇದೆ. ನಟಿ ಜಾನ್ಹವಿ ಹೇಳಿರುವಂತೆ ಅವರೂ ಸಹ ಅದೇ ವಿಐಪಿ ದರ್ಶನದ ಮೂಲಕವೇ ದರ್ಶನ ಮಾಡುತ್ತಾರೆ.
ಆದರೆ, ‘ಸಾವಿರಾರು ಮಂದಿ ಗಂಟ್ಟೆಗಟ್ಟಲೆ ದೇವರ ದರ್ಶನಕ್ಕಾಗಿ ಕಾದು ದರ್ಶನ ಪಡೆಯುತ್ತಾರೆ, ಆದರೆ ನಾನು ಸುಲಭವಾಗಿ ಹಣ ಕೊಟ್ಟು ವಿಶೇಷ ದರ್ಶನ ಪಡೆಯುತ್ತೇನೆ. ಆದರೆ ಇದು ಸರಿಯಲ್ಲ, ಹಾಗೆಂದು ನಾನು ಕೆಲವು ಕಾರಣಗಳಿಗೆ (ಸೆಲೆಬ್ರಿಟಿ ಆಗಿರುವುದರಿಂದ) ಸಾಮಾನ್ಯ ಜನರ ಜೊತೆಗೆ ಹೋಗಿ ದರ್ಶನ ಮಾಡುವಂತೆಯೂ ಇಲ್ಲ. ಹಾಗಾಗಿ ನನ್ನ ಶ್ರಮ ದಾಖಲಾಗಲಿ ಎಂಬ ಕಾರಣಕ್ಕೆ ನಾನು ಪ್ರತಿ ಬಾರಿ ಮೆಟ್ಟಿಲುಗಳನ್ನು ಹತ್ತಿ, ಕಷ್ಟಪಟ್ಟು, ಶ್ರಮಪಟ್ಟು ದರ್ಶನಕ್ಕೆ ಹೋಗುತ್ತೇನೆ’ ಎಂದಿದ್ದಾರೆ ಜಾನ್ಹವಿ.
ಇದನ್ನೂ ಓದಿ:ಹುಟ್ಟುಹಬ್ಬದಂದು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ನಟಿ ಜಾನ್ಹವಿ ಕಪೂರ್
ಕಾರಿನಲ್ಲಿ ಬೆಟ್ಟಕ್ಕೆ ಹೋಗಿ, ಅಲ್ಲಿ ಹಣ ಕೊಟ್ಟು ವಿಐಪಿ, ವಿವಿಐಪಿ ದರ್ಶನ ಮಾಡುವುದು ಜಾನ್ಹವಿಗೆ ಬಹಳ ಸುಲಭ. ಆದರೆ ತಾನು ವಿಐಪಿ ಆಗಿ ಅಲ್ಲ ಬದಲಿಗೆ ಭಕ್ತಳಾಗಿ ದರ್ಶನಕ್ಕೆ ಹೋಗಬೇಕು ಎಂಬ ಕಾರಣಕ್ಕೆ ಜಾನ್ಹವಿ ಕಪೂರ್ ಅವರು ತಿರುಪತಿ ಬೆಟ್ಟದ 3500 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನಕ್ಕೆ ಹೋಗುತ್ತಾರೆ.
ಜಾನ್ಹವಿ ಕಪೂರ್ ಬಹಳ ವರ್ಷಗಳಿಂದಲೂ ತಿರುಪತಿ ತಿಮ್ಮಪ್ಪನ ಭಕ್ತೆ. ಅವರ ತಾಯಿ ಶ್ರೀದೇವಿ ಸಹ ತಿಮ್ಮಪ್ಪನ ಭಕ್ತೆ ಆಗಿದ್ದರು. ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದಂತೆ, ಅವರಿಗೆ ತಿರುಪತಿಯಲ್ಲಿಯೇ ಮನೆ ಮಾಡಿಕೊಂಡು ತನ್ನ ಪತಿ, ಮಕ್ಕಳೊಟ್ಟಿಗೆ ನೆಲೆಸುವ ಆಸೆಯೂ ಇದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ